ಹೆಚ್‌ಡಿಕೆ ರಾಜ್ಯೋತ್ಸವ ಶುಭಾಶಯ

ಬೆಂಗಳೂರು, ನ. ೧- ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಶುಭ ಕೋರಿದ್ದು, ನಮ್ಮೆಲ್ಲರ ತನು, ಮನ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣ ಕಣದಲ್ಲೂ ಕನ್ನಡ ಇರಲಿ ಎಂದು ಆಶಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ೧೫೦೦ ವರ್ಷಗಳ ಇತಿಹಾಸವುಳ್ಳ ಕನ್ನಡ ಶಾಸ್ತ್ರೀಯ ಸ್ಥಾನ ಅಲಂಕರಿಸಿದ, ಅಷ್ಟ ಜ್ಞಾನಪೀಠಗಳ ಮೇರು ಕನ್ನಡ, ನಮ್ಮ ಬದುಕು-ಬಾಳ್ವೆಯ ತಾಯ್ಗನ್ನಡ ಎಂದಿರುವ ಅವರು, ಕನ್ನಡ ಎಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವ ಭಾಷೆ. ನಮ್ಮ ಮನಸ್ಸು-ಕನಸುಗಳನ್ನು ಅರಳಿಸಿ ಭವಿಷ್ಯಕ್ಕೆ ರೆಕ್ಕೆ ಕೊಟ್ಟು ಹಾರಲು ಶಕ್ತಿ ತುಂಬುವ ಜೀವ ಭಾಷೆ ಎಂದಿದ್ದಾರೆ.
ಕನ್ನಡಿಗರ ಮನೆ ಮನದಲ್ಲೂ ಕನ್ನಡ ಬೆಳಗುತ್ತಿದೆ ನಿಜ. ಆದರೆ ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್‌ರಾಜ್‌ಕುಮಾರ್ ಅವರು ಕನ್ನಡದ ಹಬ್ಬಕ್ಕೆ ಮುನ್ನ ನಮ್ಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದು ಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ ಎಂದು ಟ್ವೀಟ್ ಮಾಡಿದ್ದಾರೆ.
ಭೂಮಂಡಲ ಇರುವಷ್ಟು ದಿನ ಕನ್ನಡ ಇರುತ್ತದೆ. ಕನ್ನಡ ಇರುವಷ್ಟು ದಿನ ಅಪ್ಪು ಇರುತ್ತಾರೆ. ಈ ವರ್ಷ ಕನ್ನಡದ ಹಬ್ಬವನ್ನು ಪುನೀತ್‌ರಾಜ್‌ಕುಮಾರ್ ಅವರಿಗೆ ಅರ್ಪಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೋರಿದ್ದಾರೆ.