ಹೆಚ್‌ಡಿಕೆ ಭೇಟಿ ಬಿಎಸ್‌ವೈ ಸ್ಪಷ್ಟನೆ

ಬೆಂಗಳೂರು,ನ.೧೪- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ದಿವಂಗತ ಪ್ರಧಾನಿ ಜವಹರಲಾಲ್ ನೆಹರೂರವರ ೧೩೧ನೇ ಜನ್ಮ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಮಾತನಾಡಲು ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ್ದರು. ಅದು ಬಿಟ್ಟರೆ ಬೇರೆ ವಿಚಾರ ಚರ್ಚೆಯಾಗಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿಯಾಗಿರುವುದಕ್ಕೆ ನಾನಾ ರೀತಿಯ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು. ಹೆಚ್ಚಿನ ಪರಿಹಾರ
ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ನಿನ್ನೆ ೫೭೭ ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ. ಕೇಂದ್ರದಿಂದ ಈಗ ಬಂದಿರುವುದು ಮೊದಲ ಕಂತು. ಮುಂದೆ ಹೆಚ್ಚಿನ ಪರಿಹಾರ ಬರುವ ವಿಶ್ವಾಸವಿದೆ.
ಹೆಚ್ಚಿನ ಪರಿಹಾರ ಪಡೆಯಲು ಪ್ರಯತ್ನ ಮಾಡುತ್ತೇವೆ ಎಂದರು.
ಯುಪಿಎಸ್‌ಇ ಮತ್ತು ಕೆಪಿಎಸ್‌ಇ ಸ್ಪರ್ಧಾತ್ಮಕ ಪರೀಕ್ಷೆಗಳು ಒಟ್ಟಿಗೆ ಬಂದಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ಚರ್ಚಿಸಿ ಎಲ್ಲವನ್ನು ಸರಿಮಾಡುವುದಾಗಿ ಹೇಳಿದರು.
ಗುಣಗಾನ
ದಿವಂಗತ ಪ್ರಧಾನಿ ಜವಹರಲಾಲ್ ನೆಹರೂರವರು ದೇಶ ಕಂಡ ಮಹಾನ್ ನಾಯಕ,ಸ್ವತಂತ್ರವಾದ ನಂತರ ಆಧುನಿಕ ಭಾರತಕ್ಕೆ ಶ್ರಮಿಸಿದ್ದಾರೆ. ಅಭಿವೃದ್ಧಿಯ ಹರಿಕಾರ ಎಂದು ಗುಣಗಾನ ಮಾಡಿ ಅವರ ಜನ್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನಪಿಸಿಕೊಳ್ಳುವ ಕಾರ್ಯ ಮಾಡಿದ್ದೇವೆ ಎಂದರು.