ಹೆಚ್‌ಡಿಕೆಗೆ ಸೋಂಕು ಹಾಸಿಗೆ ಸಿಗದೆ ಕಂಗಾಲು

ಬೆಂಗಳೂರು,ಏ.೧೭- ಕೊರೊನಾ ಸೋಂಕಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಲು ಹಾಸಿಗೆ ಸಿಕ್ಕಿಲ್ಲ.
ಕುಮಾರಸ್ವಾಮಿಯವರಂತಹ ಪ್ರಭಾವಿ ನಾಯಕರಿಗೇ ಹಾಸಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸೋಂಕು ತಗುಲಿರುವ ಜನಸಾಮನ್ಯರ ಗತಿ ಏನು? ಎಂಬ ಆತಂಕ ಸೃಷ್ಟಿಯಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಾಸಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ರುದ್ರನರ್ತನ ಭೀಕರತೆಗೆ ಸಾಕ್ಷಿಯಾಗಿದೆ.
ಬೆಂಗಳೂರಿನಲ್ಲಿ ಕಳೆದ ೧೫ ದಿನಗಳಿಂದ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗಲು ಜನರಿಗೆ ಹಾಸಿಗೆಗಳೇ ಸಿಗುತ್ತಿಲ್ಲ. ಜನರ ಗೋಳಾಟ, ಪರದಾಟ ಕೇಳುವವರೇ ಇಲ್ಲ.
ಇದು ಸಾಮಾನ್ಯರ ಪರಿಸ್ಥಿತಿ ಎಂದು ಭಾವಿಸಿದ್ದರೆ ತಪ್ಪು. ಹಣವಿದ್ದವರಿಗೂ, ಅವರು ಬಯಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಲು ಅವಕಾಶ ಸಿಗುತ್ತಿಲ್ಲ ಎಂಬುದು ಸತ್ಯ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಮುಗಿಸಿ ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ಸುಸ್ತು ಕಾಣಿಸಿಕೊಂಡಿದ್ದು, ಅವರು ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇಂದು ಬೆಳಿಗ್ಗೆ ವೈದ್ಯರನ್ನು ಕರೆಸಿ ತಪಾಸಣೆಗೆ ಒಳಗಾದಾಗ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಂತರ ಅವರು ಮಣಿಪಾಲ್ ಆಸ್ಪತ್ರೆ ಸೇರಲು ಬಯಸಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಪ್ರಯತ್ನ ನಡೆಸಿದರಾದರೂ ಅದೂ ಫಲ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ ರಮೇಶ್‌ಗೌಡ ಮಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆಗೆ ಖುದ್ದು ಹಾಜರಾಗಬೇಕಿದ್ದು, ಕೊರೊನಾ ಕಾರಣದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿ ನಂತರ, ಅವರು ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಲಿದ್ದಾರೆ.