ಹೆಚ್‌ಐವಿಯಿಂದ ದೂರವಿರಿ, ಆದರ್ಶ ವ್ಯಕ್ತಿಗಳಾಗಲು ಕರೆ

ಕೋಲಾರ,ಡಿ.೨- ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಏಡ್ಸ್‌ನಂತಹ ಮಾರಕ ರೋಗಗಳಿಂದ ದೂರವಿರಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಕರೆ ನೀಡಿದರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇಡೀ ವಿಶ್ವಕ್ಕೆ ಮಾರಕವಾಗಿರುವ ಈ ರೋಗದ ಕುರಿತು ಶಾಲಾ ಹಂತದಲ್ಲೇ ಅರಿವು ನೀಡುವ ಕಾರ್ಯವಾಗುತ್ತಿದೆ ಎಂದರು.
ವಿಜ್ಞಾನ ಶಿಕ್ಷಕಿ ಎಂ.ಬಿ.ಶ್ವೇತಾ ಉಪನ್ಯಾಸ ನೀಡಿ, ಎಚ್‌ಐವಿ ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಅರಿವು ಅಗತ್ಯವಾಗಿದೆ, ಅನೈತಿಕ ಸಂಬಂಧ ಮಾತ್ರವಲ್ಲ, ಸೋಂಕಿರುವ ವ್ಯಕ್ತಿಯಿಂದ ರಕ್ತ ಪಡೆಯುವುದರಿಂದ, ಒಂದೇ ಸಿರಂಜ್ ಪಡೆಯುವುದರಿಂದಲೂ ಈಮಾರಿ ವಕ್ಕರಿಸಬಹುದು ಎಂದರು.
ಆಧುನಿಕ ಜೀವನ ಶೈಲಿಯ ಪ್ರಭಾವಕ್ಕೆ ಒಳಗಾಗಿರುವ ಯುವಜನತೆ ಏಡ್ಸ್‌ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ ಎಂದರು.
ಎಚ್.ಐ.ವಿ. ಪೀಡಿತರನ್ನು ಮಾನವೀಯತೆಯ ದೃಷ್ಠಿಯಿಂದ ಕಾಣಬೇಕು. ಅವರಲ್ಲಿ ನೈತಿಕ ಸ್ಥೈರ್ಯ ತುಂಬಬೇಕು. ಏಡ್ಸ್ ಕಾಯಿಲೆಯಿಂದ ಉಂಟಾಗುವ ತೊಂದರೆ ಹಾಗೂ ಜೀವ ಹಾನಿಯ ಕುರಿತು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮೂಲಕ ಸರ್ಕಾರ ಜಾಗೃತಿ ಮೂಡಿಸುತ್ತಿದೆ ಎಂದರು. ಹೆಚ್‌ಐವಿ ವೈರಸ್‌ನಿಂದಾಗಿ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂದುತ್ತದೆ, ಅನೇಕ ರೋಗಗಳಿಗೆ ತುತ್ತಾಗುವ ಮೂಲಕ ಜೀವನವೇ ಬೇಡವೆನಿಸುಷ್ಟು ಆತಂಕ ಕಾಡುತ್ತದೆ ಎಂದು ಎಚ್ಚರಿಸಿದ ಅವರು, ಜೀವನದ ಪ್ರತಿ ಹಂತದಲ್ಲೂ ನೈತಿಕಮೌಲ್ಯಗಳಡಿ ಮುನ್ನಡೆಯಬೇಕು ಎಂದರು.
ತಾಯಿಯಿಂದ ಮಕ್ಕಳಿಗೆ, ಹದಿಹರೆಯರು, ವೃದ್ಧರು ಎಂಬ ಯಾವ ಬೇಧವಿಲ್ಲದೆ ಮಾನವನ ದೇಹಕ್ಕೆ ಒಕ್ಕರಿಸಿ ಆರೋಗ್ಯವನ್ನು ಹಿಂಡಿ ಹಿಪ್ಪೆಯಾಗಿಸಿ ಬಿಡುತ್ತದೆ. ಮನುಕುಲದ ನೆಮ್ಮದಿ ಕೆಡಿಸುವ ಬಗ್ಗೆ ಪ್ರಪಂಚದ್ಯಾದಂತ ಮುಂಜಾಗ್ರತಾ ಅಭಿಮಾನ ಕೈಗೊಳ್ಳಲಾಗಿದೆ ಎಂದರು.
ಹಿರಿಯ ಶಿಕ್ಷಕ ಸಚ್ಚಿದಾನಂದಮೂರ್ತಿ, ಕನ್ನಡ ಶಿಕ್ಷಕ ವಿ.ವೆಂಕಟರೆಡ್ಡಿ ಹೆಚ್‌ಐವಿ ಮಾರಕತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ನೀಡಿದರು.
ಆಶಾ ಕಾರ್ಯಕರ್ತೆ ಚಂದ್ರಮ್ಮ ಮಾತನಾಡಿ, ಹೆಚ್‌ಐವಿ ಪೀಡಿತರನ್ನು ಮಾನವೀಯತೆಯಿಂದ ಕಾಣಬೇಕು, ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವಾ ಸೌಲಭ್ಯ ಸಿಗುತ್ತಿದ್ದು, ಅದರ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭವಾನಿ, ಲೀಲಾ,ಸುಗುಣಾ, ಗೋಪಾಲಕೃಷ್ಣ, ಫರೀದಾ, ಶ್ರೀನಿವಾಸಲು, ಆಶಾ ಕಾರ್ಯಕರ್ತೆ ಅರುಣಮ್ಮ ಮತ್ತಿತರರಿದ್ದರು.