ಹೆಚ್೩ಎನ್೨ ವೈರಸ್ ಪತ್ತೆ ಮಾಸ್ಕ್ ಮತ್ತೆ

ಸಂಜೆ ಮಾರ್ಗಸೂಚಿ
ಬೆಂಗಳೂರು,ಮಾ.೬:ರಾಜ್ಯದಲ್ಲಿ ಹೆಚ್೩ಎನ್೨ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ಎಲ್ಲ ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಜನಸಂದಣಿ ಇರುವ ಕಡೆ ಸಾರ್ವಜನಿಕರು ಮಾಸ್ಕ್ ಧರಿಸುವ ಸಲಹೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಂದು ಸಂಜೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.ಹೆಚ್೩ಎನ್೨ ವೈರಸ್ ರಾಜ್ಯದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ತಜ್ಞರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದು, ಮಾಸ್ಕ್ ಧರಿಸುವಿಕೆಯ ಸಲಹೆ, ಜನಜಂಗುಳಿ ಸೇರದಂತೆ ಎಚ್ಚರ ವಹಿಸುವ ಜತೆಗೆ ೧೫ ವರ್ಷದ ಕೆಳಗಿನ ಮಕ್ಕಳು ಒಟ್ಟಾಗಿ ಸೇರದಂತೆ ಎಚ್ಚರ ವಹಿಸುವ ಕೆಲ ಮಾರ್ಗಸೂಚಿಗಳನ್ನು ಸರ್ಕಾರ ಸಂಜೆ ಬಿಡುಗಡೆ ಮಾಡಲಿದೆ.

ಅಪಾಯಕಾರಿ ಅಲ್ಲ ಗಾಬರಿಪಡುವ ಅಗತ್ಯವಿಲ್ಲ ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಅವರು, ಹೆಚ್೩ಎನ್೨ ವೈರಸ್ ಸೋಂಕು ಅಪಾಯಕಾರಿ ಅಲ್ಲ. ಈ ಬಗ್ಗೆ ಗಾಬರಿಪಡುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದರು.ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕು ಹೆಚ್ಚಳವಾಗಿ ಹೆಚ್೩ಎನ್೨ ಹೊಸ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿಂದು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞರ ಹಾಗೂ ಅಧಿಕಾರಿಗಳ ಸಭೆ ನಡೆಸಿ,ಕೆಲವು ದಿನಗಳಿಂದ ಹೆಚ್೩ಎನ್೨ ವೈರಸ್ ಹರಡುವಿಕೆಯನ್ನು ಗಮನಿಸಿ ಇಂದು ಸಭೆ ಮಾಡಿದ್ದೇವೆ. ಗಾಬರಿಪಡುವ ಯಾವುದೇ ಸ್ಥಿತಿ ನಿರ್ಮಾಣ ಆಗಿಲ್ಲ. ಹಾಗೆಂದು ಇದನ್ನು ನಿರ್ಲಕ್ಷ್ಯ ಮಾಡುವ ಹಾಗೂ ಇಲ್ಲ. ಹಾಗಾಗಿ ಇಂದಿನಿಂದಲೇ ಮಾಸ್ಕ್ ಧರಿಸುವುದನ್ನು ಆರೋಗ್ಯ ಕಾರ್ಯಕರ್ತರಿಗೆ ಕಡ್ಡಾಯ ಮಾಡಲಾಗಿದೆ ಎಂದರು.ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುತ್ತಿದ್ದರು. ಈಗ ಆಸ್ಪತ್ರೆಯಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿ ಕಡ್ಡಾಯ ಮಾಸ್ಕ್ ಆದೇಶ ಹೊರಡಿಸಲಾಗುವುದು ಎಂದರು.ಹೆಚ್೩ಎನ್೨ ಸೋಂಕು ಅಪಾಯಕಾರಿಯಲ್ಲ. ಕೋವಿಡ್ ಭೀತಿಯ ಲಕ್ಷಣಗಳೇ ಇರುತ್ತವೆ. ರಾಜ್ಯದಲ್ಲಿ ಇದುವರೆಗೂ ೨೬ ಪ್ರಕರಣಗಳು ಪತ್ತೆಯಾಗಿವೆ ಎಂದರು.ಇಂದು ಸಂಜೆ ಹೆಚ್೩ಎನ್೨ಗೆ ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಹೊರಡಿಸುತ್ತೇವೆ. ಕೋವಿಡ್‌ಗೆ ಕೊಡುತ್ತಿರುವ ಚಿಕಿತ್ಸೆಯನ್ನೇ ಮುಂದುವರೆಸುತ್ತೇನೆ. ನಮ್ಮಲ್ಲಿ ಯಾವುದೇ ಔಷಧಿಯ ಕೊರತೆ ಇಲ್ಲ ಎಂದರು.ಆರೋಗ್ಯ ಸಿಬ್ಬಂದಿಗೆ ಇನ್‌ಫ್ಲೂಯೆಂಜಾ ಆರೋಗ್ಯ ಲಸಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ದೇಶದ ಕೆಲವು ಕಡೆ ಹೆಚ್ ೩ ಎನ್ ೨ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವ ಡಾ. ಕೆ. ಸುಧಾಕರ್‌ರವರು ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಐಸಿಯುನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬೆಂಗಳೂರಿನ ವಾಣಿವಿಲಾಸ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾರಿ ಮತ್ತು ಐಎಲ್‌ಐ ಪ್ರಕರಣಗಳಲ್ಲಿ ಪ್ರತಿದಿನ ೨೫ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದರು.ಹೆಚ್೩ಎನ್೨ ಸೋಂಕು ೧೫ ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ ೬೫ ವರ್ಷ ಮೇಲ್ಪಟ್ಟ ವೃದ್ಧರಿಗೆ, ಗರ್ಭಿಣಿಯರಿಗೆ ಸುಲಭವಾಗಿ ತಗುಲುವ ಸಾಧ್ಯತೆಗಳಿವೆ. ಹಾಗಾಗಿ. ಇವರೆಲ್ಲ ಎಚ್ಚರಿಕೆಯಿಂದಿರಬೇಕು. ಅನಗತ್ಯ ಗುಂಪು ಸೇರಬಾರದು, ಸಾಬೂನಿನಿಂದ ಕೈತೊಳೆದುಕೊಳ್ಳಬೇಕು ಎಂದರು.ಹೆಚ್೩ಎನ್೨ ಅಪಾಯಕಾರಿ ಅಲ್ಲ. ದೀರ್ಘಕಾಲದ ಕೆಮ್ಮು ಇರುತ್ತದೆ. ಆದರೂ ಎಲ್ಲರೂ ಎಚ್ಚರವಹಿಸಬೇಕು ಎಂದು ಹೇಳಿದರು. ಕೋವಿಡ್ ಮಾದರಿಯಲ್ಲೇ ಹೆಚ್೩ಎನ್೨ ತಪಾಸಣೆಯನ್ನೂ ಮಾಡಲಾಗುವುದು. ತಪಾಸಣೆ ಮಾಡಿಸಿಕೊಳ್ಳಲು ಸರ್ಕಾರ ದರವನ್ನು ನಿಗದಿ ಮಾಡಲಿದೆ ಎಂದು ಹೇಳಿದರು.