ಬೆಂಗಳೂರು, ಜೂ. ೨೮- ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಳ್ಳಿ ಹಾಕಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೇವು. ನಾವು ಆರೋಪ ಮಾಡಿ, ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಾ ಎಂದರು.
ನಮ್ಮ ಸರ್ಕಾರದಲ್ಲಿ ವರ್ಗಾವಣೆಗಾಗಿ ದುಡ್ಡು ಕೇಳಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪ ಸರಿಯಲ್ಲ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಒಳ್ಳೆಯ ಹುದ್ದೆಗಳನ್ನು ನೀಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಮಾತ್ರ ಮಣೆ ಹಾಕುತ್ತಿವೆ. ವರ್ಗಾವಣೆ ದಂಧೆ ನಡೆದಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಎಷ್ಟು ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರ ಆ ಹಣವನ್ನು ಬಿಡುಗಡೆ ಮಾಡುತ್ತದೆ. ನಾವು ಎಲ್ಲ ನೌಕರರಿಗೂ ವೇತನವನ್ನು ನೀಡುತ್ತೇವೆ. ಸುಮ್ಮನೆ ಊಹಾಪೂಹದ ಪ್ರಶ್ನೆಗಳು ಬೇಡ ಎಂದು ಅವರು ಹೇಳಿದರು.