ಹೆಚ್‌ಡಿಕೆಗೆ ಸುಮಲತಾ ಬೆಂಬಲ

ಬಿಜೆಪಿ ಸೇರಲು ನಿರ್ಧಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಮಂಡ್ಯ ಜಿಲ್ಲೆಯ ಶ್ರೀ ಕಾಳಿಕಾಂಬ ದೇವಾಲಯದ ಬಳಿ ನಡೆದ ಕಾರ್ಯಕರ್ತರ ಸಭೆಯನ್ನು ಸಂಸದೆ ಸುಮಲತಾ ಉದ್ಘಾಟಿಸಿದರು. ನಟ ದರ್ಶನ್, ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಮತ್ತಿತರರು ಇದ್ದಾರೆ.

ಬೆಂಗಳೂರು,ಏ.೩:ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಈ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರುವ ತೀರ್ಮಾನ ಮಾಡಿದ್ದು, ಭಾರತೀಯ ಜನತಾ ಪಕ್ಷ ಸೇರುವುದಾಗಿ ಘೋಷಣೆ ಮಾಡಿ, ಈ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದಾಗಿಪ್ರಕಟಿಸಿದ್ದಾರೆ.ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ್ದ ಸಂಸದೆ ಸುಮಲತಾ ಅಂಬರೀಷ್ ಮಂಡ್ಯದಲ್ಲಿಂದು ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದು, ಅವರ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ರಾಜ್ಯದ ಜನರಲ್ಲಿ ಇತ್ತು.
ಈ ಕುತೂಹಲಕ್ಕೆ ಇಂದು ತೆರೆ ಎಳೆದಿರುವ ಸಂಸದೆ ಸುಮಲತಾ ಅಂಬರೀಷ್, ಬಿಜೆಪಿ ಸೇರ್ಪಡೆಯಾಗುವ ಘೋಷಣೆ ಮಾಡಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರುವ ತೀರ್ಮಾನ ಮಾಡಿದ್ದಾರೆ.ಈ ಹಿಂದೆಯೇ ಬಿಜೆಪಿ ಪಕ್ಷಕ್ಕೆ ಅವರು ಬೆಂಬಲ ಘೋಷಣೆ ಮಾಡಿದ್ದರು. ಹಾಗೆಯೇ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲೂ ಇದ್ದರು. ಆದರೆ, ಮಂಡ್ಯ ಕ್ಷೇತ್ರವನ್ನು ಬಿಜೆಪಿ ಮೈತ್ರಿಪಕ್ಷವಾದ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಸುಮಲತಾ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರರಾಗಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆ ಇತ್ತಾದರೂ ಅದನ್ನೆಲ್ಲ ಹುಸಿ ಮಾಡಿರುವ ಸುಮಲತಾ ಅಂಬರೀಷ್ ಅವರು ಚುನಾವಣೆಯಲ್ಲಿ ಕಣಕ್ಕಿಳಿಯದಿರುವ ತೀರ್ಮಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸುಮಲತಾ ಘೋಷಣೆ
ಮಂಡ್ಯದಲ್ಲಿಂದು ತಮ್ಮ ಬಂಬಲಿಗರ ಬಹಿರಂಗ ಸಭೆ ನಡೆಸಿದ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಸುಮಲತಾ ಅಂಬರೀಷ್ ಅವರು, ನಾನು ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುತ್ತಿಲ್ಲ, ಪಕ್ಷೇತರರಾಗಿಯೂ ಸ್ಪರ್ಧೆ ಮಾಡಲ್ಲ, ಬಿಜೆಪಿ ಸೇರುತ್ತೇನೆ ಎಂದರು.
ನಾನು ಮಂಡ್ಯದಿಂದ ಚುನಾವಣೆಯಲ್ಲಿ ನಿಲ್ಲಲ್ಲ ಎಂದಾಕ್ಷಣ ಮಂಡ್ಯದಿಂದ ನಿರ್ಗಮಿಸುತ್ತಿದ್ದೇನೆ ಎಂದು ಯಾರೂ ಭಾವಿಸಬೇಕಾಗಿಲ್ಲ. ನಾನು ಮಂಡ್ಯವನ್ನು ಬಿಡಲ್ಲ ನಾನು ರಾಜಕೀಯ ಮಾಡುವುದಾದರೆ ಮಂಡ್ಯದಿಂದ ಮಾತ್ರ ಎಂದು ಸ್ಪಷ್ಟಪಡಿಸಿದರು. ಮಂಡ್ಯ ಬಿಟ್ಟು ಬೇರೆಡೆಯಿಂದ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದು ನಿಜ. ಆದರೆ ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ. ಈ
ಚುನಾವಣೆಯಲ್ಲಿ ಮಾತ್ರ ಮಂಡದಿಂದ ಸ್ಪರ್ಧಿಸಲ್ಲ ಎಂದರು.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನನ್ನ ಬೆಂಬಲ ಎಂದು ಅವರು ಘೋಷಣೆ ಮಾಡಿದರು.

ದರ್ಶನ್-ಅಭಿಷೇಕ್ ಸಭೆಯಲ್ಲಿ ಭಾಗಿ
ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಿದ ಬೆಂಬಲಿಗರ ಸಭೆಯಲ್ಲಿ ನಟ ದರ್ಶನ್ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಸಹ ಉಪಸ್ಥಿತರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಸುಮಲತಾ ಪರ ನಾಯಕ ನಟರುಗಳಾದ ದರ್ಶನ್ ಮತ್ತು ಯಶ್ ಜೋಡೆತ್ತುಗಳಾಗಿ ಇಡೀ ಮಂಡ್ಯದಲ್ಲಿ ಪ್ರಚಾರ ಮಾಡಿ ಸುಮಲತಾ ಗೆಲುವಿಗೆ ಶ್ರಮಿಸಿದ್ದರು. ಇಂದಿನ ಸಭೆಯಲ್ಲಿ ದರ್ಶನ್ ಹಾಜರಿದ್ದರು, ಹಾಗೆಯೇ ಸುಮಲತಾ ಅವರ ಹಲವು ಬಂಬಲಿಗರು ಸಭೆಯಲ್ಲಿ ಪಾಲ್ಗೊಂಡಿದ್ದರು.