ಹೆಚ್ಚು ಸೊಂಕಿತರ ಪ್ರದೇಶಗಳನ್ನು ಹೊರತುಪಡಿಸಿ ಲಾಕ್‍ಡೌನ್ ಸಡಿಲಗೊಳಿಸಬೇಕು: ಶಾಸಕ ಯತ್ನಾಳ

ವಿಜಯಪುರ, ಜೂ.3-ಈಗಾಗಲೇ ವಿಜಯಪುರ ನಗರದಲ್ಲಿ ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ ರವರು ಸತತವಾಗಿ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದ್ದರಿಂದ ಇಂದು ಗಣನೀಯವಾಗಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ.
ಈ ನಿಟ್ಟಿನಲ್ಲಿ ನಗರ ಶಾಸಕರು ವಿಜಯಪುರ ಜಿಲ್ಲೆಯಲ್ಲಿ ಯಾವ-ಯಾವ ತಾಲೂಕಿನಲ್ಲಿ ಆಯಾ ತಾಲೂಕು ಕೇಂದ್ರಗಳು ಹಾಗೂ ಆಯಾ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೊಂಕಿತರು ಇರುತ್ತಾರೆ ಎಂಬುದನ್ನು ಪರಿಗಣಿಸಿ, ಅಲ್ಲಿ ಮಾತ್ರ ಲಾಕ್‍ಡೌನ್ ಮುಂದುವರೆಸಿ, ಎಲ್ಲೆಲ್ಲಿ ಸೊಂಕಿತರ ಪ್ರಮಾಣ ಕಡಿಮೆಯಾಗಿದೆಯೋ ಅಲ್ಲಿ ಲಾಕ್‍ಡೌನ್ ಮುಕ್ತ ಪ್ರದೇಶವೆಂದು ಘೋಷಿಸಬೇಕು. ತದನಂತರ ಎಲ್ಲೆಲ್ಲಿ ಸೊಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹಂತ ಹಂತವಾಗಿ ಲಾಕ್‍ಡೌನ್ ತೆಗೆಯಬೇಕು ಎಂದು ಹೇಳಿದ್ದಾರೆ.
ಕಾರಣ ಈಗಾಗಲೇ ವಿಜಯಪುರ ನಗರ ಪ್ರದೇಶದಲ್ಲಿ ಗಣನೀಯವಾಗಿ ಸೊಂಕಿತರ ಸಂಖ್ಯೆ ಕಡಿಮೆಯಾಗಿರುವದರಿಂದ ಇದನ್ನು ಲಾಕ್‍ಡೌನ್ ಮುಕ್ತ ಪ್ರದೇಶವಾಗಿ ಘೋಷಿಸಬೇಕು. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾರಿಗೊಳಿಸಬೇಕೆಂದು ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳರವರು ಸರ್ಕಾರವನ್ನು ಕೋರಿರುತ್ತಾರೆ.