
ಸಂಜೆವಾಣಿ ನ್ಯೂಸ್
ಮೈಸೂರು: ಆ.10:- ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದು, ಈ ವೇಳೆ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನರೇಗಾ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು, ಮ-ನರೇಗಾ ಯೋಜನೆಯಡಿಯಲ್ಲಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಮಾನವ ದಿನಗಳನ್ನು ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿಗಳ ಪ್ರಗತಿ, ಎನ್ ಎಂ ಎಂ ಎಸ್, ಅಮೃತ ಸರೋವರ ಯೋಜನೆ ಪ್ರಗತಿ, ಪಂಚ ಅಭಿಯಾನ, ಗೋಮಾಳ ಪ್ರಗತಿ, ಸಾಮಾಜಿಕ ಲೆಕ್ಕ ಪರಿಶೋಧನೆ, ಆಧಾರ್ ಸೀಡಿಂಗ್, ಆಧಾರ್ ಪೇಮೆಂಟ್, ಮಹಿಳಾ ಭಾಗವಹಿಸುವಿಕೆ, ಎಸ್ ಎಚ್ ಜಿ ಶೆಡ್, ಕೂಸಿನ ಮನೆ ಯೋಜನೆ ಪ್ರಗತಿ ಹಾಗೂ ಅನುಷ್ಠಾನ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆಗಳಲ್ಲಿನ ಕಾಮಗಾರಿಗಳ ಪ್ರಗತಿ ಸೇರಿದಂತೆ ಇತರೆ ವಿಷಯಗಳ ಕುರಿತು ನಿಗಧಿತ ಸಮಯದಲ್ಲಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಭೌಗೋಳಿಕ ಬೆಳೆಗಳಾದ ಮೈಸೂರು ಮಲ್ಲಿಗೆ, ಮೈಸೂರು ವಿಳ್ಯೆದೆಲೆ ಮತ್ತು ನಂಜನಗೂಡು ರಸಬಾಳೆ ಬೆಳೆಗಳಿಗೆ ನರೇಗಾದಡಿ ವಿಶೇಷ ಒತ್ತು ನೀಡಿ, ಈ ತಳಿಗಳನ್ನು ಉಳಿಸುವಂತೆ ಸೂಚಿಸಿದರು. ಅಮೃತವಾಟಿಕೆ ಅಭಿಯಾನದಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 75 ಸ್ಥಳೀಯ ತಳಿಗಳ ಗಿಡಗಳನ್ನು ನೆಟ್ಟು, ಪೆÇೀಷಿಸುವುದರ ಮೂಲಕ ಹಸಿರೀಕರಣಗೊಳಿಸುವಂತೆ ಕ್ರಮವಹಿಸಿ ಎಂದರು.
ಬಳಿಕ ಮೈಸೂರು ತಾಲ್ಲೂಕಿನ ನಾಗವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾಲ ಗ್ರಾಮದಲ್ಲಿ ಸಾಮಾಜಿಕ ಅರಣ್ಯದ ನರ್ಸರಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕಲ್ಯಾಣಿ, ಉದ್ಯಾನವನ, ಸಾಕದೇವಮ್ಮ ಕಟ್ಟೆ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕ, ಶಿಶುಪಾಲನ ಕೇಂದ್ರವನ್ನು ವೀಕ್ಷಿಸಿದರು.
ಹುಣಸೂರು ತಾಲ್ಲೂಕಿನ ಬಿಳಿಕೆರೆ, ಚಿಕ್ಕ ಬೀಚನಹಳ್ಳಿ, ಮರದೂರು, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಲೈಬ್ರರಿ, ರಸ್ತೆ ಬದಿ ನೆಡು ತೋಪು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ ಕೆರೆ ಕೋಡಿ, ವೈಯಕ್ತಿಕ ಕಾಮಗಾರಿಯಾದ ಡ್ರ್ಯಾಗನ್ ಫ್ರ್ಯೂಟ್ ಬೆಳೆ ಅಭಿವೃದ್ಧಿ, ಇಂಗು ಗುಂಡಿ, ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಶೈಲ ದಿಡ್ಡಿಮನಿ, ತಾಂತ್ರಿಕ ಜಂಟಿ ನಿರ್ದೇಶಕರಾದ ಪಿ.ಜಿ.ವೇಣುಗೋಪಾಲ್, ಉಪಕಾರ್ಯದರ್ಶಿ (ಅಭಿವೃದ್ಧಿ) ಎಂ.ಕೃಷ್ಣರಾಜು ಹಾಗೂ ಎಲ್ಲಾ ಅನುಷ್ಠಾನ ಇಲಾಖೆ ಅಧಿಕಾರಿಗಳು, ಎಲ್ಲಾ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು(ಗ್ರಾ.ಉ) ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.