ಹೆಚ್ಚು ಟ್ರಿಪ್‍ಗೆ ಬೇಸತ್ತು ಮೈಮೇಲೆ ಡೀಸೆಲ್ ಹಾಕಿಕೊಂಡು ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆ ಯತ್ನ

ಕಲಬುರಗಿ,ಜು.14: ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಮ್ ನಿರ್ವಾಹಕನು ಮೈಮೇಲೆ ಡೀಸೆಲ್ ಸುರುವಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಡಿಪೋ ನಂಬರ್ 2ರಲ್ಲಿ ವರದಿಯಾಗಿದೆ.
ಬಸ್ ಡಿಪೋದಲ್ಲಿ ಚಾಲಕ ಕಮ್ ನಿರ್ವಾಹಕ ಬೀರಣ್ಣ ಅವರು ಮೈಮೇಲೆ ಡೀಸೆಲ್ ಸುರಿದುಕೊಂಡು, ಇನ್ನೇನು ಬೆಂಕಿ ಹಚ್ಚಿಕೊಳ್ಳಲು ಯತ್ನಿಸುತ್ತಿರುವಾಗಲೇ ಅಲ್ಲಿದ್ದ ಸಹುದ್ಯೋಗಿಗಳು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಸಿಬ್ಬಂದಿ ಮಾತ್ರ ದಿನವೂ ಸಾಯುವುದಕ್ಕಿಂತ ಒಮ್ಮೆಲೆ ಸಾಯುವೆ ಎಂದು ಹೇಳಿ ಅವರಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಯತ್ನ ಮುಂದುವರೆಸಿದರು. ಆದಾಗ್ಯೂ, ಸಹುದ್ಯೋಗಿಗಳು ಆತನಿಗೆ ಬಿಡದೇ ರಕ್ಷಿಸಿದರು. ನೀವು ಜೀವ ಕಳೆದುಕೊಂಡರೆ ನಿನ್ನ ಪತ್ನಿ, ಮಕ್ಕಳ ಗತಿಯೇನು? ನೌಕರಿ ಹೋದರೆ ಹೋಯಿತು. ನಿನ್ನ ಜೀವ ಹೋದರೆ ನಿನ್ನ ಕುಟುಂಬದವರ ಬದುಕು ಹೇಗೆ? ಎಂದು ಸಹುದ್ಯೋಗಿಗಳು ಬುದ್ದಿವಾದ ಹೇಳಿದರು. ಆತ್ಮಹತ್ಯೆ ಯತ್ನದಿಂದಾಗಿ ಬಸ್ ಡಿಪೋದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕ ಮತ್ತು ನಿರ್ವಾಹಕ ಬೀರಣ್ಣ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿ. ನನಗೆ ಕಲಬುರ್ಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಟ್ರಿಪ್ ಸಿಂಗಲ್ ಹೋಗಿ ಬರಲು ಸೂಚನೆ ಇತ್ತು. ಅದು ಆಗದೇ ಹೋದರೆ ಮರುದಿನ ಕೆಲಸ ಕೊಡದೇ ಡಿಪೋ ಮ್ಯಾನೇಜರ್ ಮಂಜುನಾಥ್ ಅವರು ಕಿರಿಕಿರಿ ಮಾಡುತ್ತಿದ್ದರು. ಇದರಿಂದ ಬೇಸತ್ತಿದ್ದೆ ಎಂದು ತಿಳಿಸಿದರು.
ಮೊದಲೇ ನನಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯಾಗಿದೆ. ನಾನು ಚಾಲಕ ಮತ್ತು ನಿರ್ವಾಹಕನಾಗಿ 8 ಟ್ರಿಪ್ ಹೋಗಿ ಬರಲು ಸುಮಾರು ಹತ್ತು ತಾಸುಗಳ ಅವಧಿ ಬೇಕಾಗುತ್ತದೆ. ಅಲ್ಲದೇ ಒಬ್ಬನೇ ಎರಡೂ ಕೆಲಸಗಳನ್ನು ಮಾಡುವುದರಿಂದ ನನಗೂ ಒತ್ತಡ ಆಗುತ್ತಿದೆ. ಹೀಗಾಗಿ ಆರು ಟ್ರಿಪ್ ಮಾತ್ರ ಕೊಡಲು ಕೋರಿದರೂ ಸಹ ನನಗೆ 8 ಟ್ರಿಪ್ ಕೊಡಲಾಗುತ್ತಿತ್ತು. ಬೇಡ ಎಂದರೆ ಕಿರುಕುಳ ನೀಡಲಾಗುತ್ತಿತ್ತು. ಕೆಲಸಕ್ಕೆ ಹಾಜರಾಗಲು ಹೋದರೆ ಡಿಸಿಯವರ ಹತ್ತಿರ ಹೋಗು ಎಂದು ಹೇಳುತ್ತಿದ್ದರು. ಅಲ್ಲದೇ ನಿನಗೆ ಕೆಲಸ ಇಲ್ಲ ಎಂದು ಹೇಳುತ್ತಿದ್ದರು. ಒಮ್ಮೊಮ್ಮೆ ಡಿಪೋ ಮ್ಯಾನೇಜರ್ ಇರುತ್ತಿರಲಿಲ್ಲ. ಹೀಗಾಗಿ ಅಲೆದಾಡುವ ಸ್ಥಿತಿ ಬರುತ್ತಿತ್ತು. ಕರ್ತವ್ಯಕ್ಕೆ ಹಾಜರಾಗುವುದೇ ನನಗೆ ಒಂದು ಸಮಸ್ಯೆಯಾಗಿತ್ತು ಎಂದು ಅವರು ದೂರಿದರು.
ಪ್ರತಿ ದಿನ ಐದುವರೆನೂರು ಕಿ.ಮೀ. ಹೋಗು ಎಂದು ಹೇಳುತ್ತಾರೆ. ಅಷ್ಟು ಹೋಗುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಇದು ನನಗೊಬ್ಬನಿಗೆ ತೊಂದರೆ ಅಲ್ಲ, ಎಲ್ಲರಿಗೂ ಇದೆ. ಹಾಗಾಗಿ ನನ್ನಿಂದ ಉಳಿದವರಿಗೆ ಒಳ್ಳೆಯದಾಗಲಿ ಎಂದು ಆತ್ಮಹತ್ಯೆಗೆ ಯತ್ನಿಸಿದೆ ಎಂದು ಅವರು ಹೇಳಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ಸಿದ್ದಪ್ಪ ಗಂಗಾಧರ್ ಅವರು ಭೇಟಿ ನೀಡಿ ವಿಚಾರಣೆ ಮಾಡಿದರು. ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಚಾಲಕರಿಗೆ ಹೆಚ್ಚುವರಿ ಶೆಡ್ಯೂಲ್ ಹಾಕಲಾಗಿದೆ. ಅದನ್ನು ಮಾಡುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದರು. ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಹಿನ್ನೆಲೆಯಲ್ಲಿ ಟ್ರಿಪ್ ಹೆಚ್ಚು ಮಾಡಲಾಗಿತ್ತು. ಇದರಿಂದ ಬೀರಣ್ಣ ಅವರು ಬೇಸತ್ತು ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಆರು ಟ್ರಿಪ್ ಇತ್ತು. ಈಗ 8 ಟ್ರಿಪ್ ಮಾಡಲಾಗಿದೆ. ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ ಎಂದು ಹೇಳಿದರು.
ಹಿಂದಿನ ವರದಿ ತೆಗೆದು ನೋಡಿದಾಗ ನಮ್ಮ ಡಿಪೋ ಒಳ್ಳೆಯ ರೆಕಾರ್ಡ್ ಹೊಂದಿದೆ. ಹೊಸ ಬಸ್ ಹಾಗೂ ಸಿಬ್ಬಂದಿಗಳು ಬರಲಿದ್ದಾರೆ. ಆಗ ಟ್ರಿಪ್ ಲೋಡ್ ಕಡಿಮೆಯಾಗುತ್ತದೆ. ಅಲ್ಲಿಯವರೆಗೂ ಚಾಲಕ ಮತ್ತು ನಿರ್ವಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.