ಹೆಚ್ಚುವರಿ ಶೇ.20ರಷ್ಟು ಮತಯಂತ್ರಗಳು ಮೀಸಲು: ಡಿಸಿ


ಬಳ್ಳಾರಿ,ಏ.02: ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಪಾರದರ್ಶಕ ಮತ್ತು ವಿದ್ಯುನ್ಮಾನ ಮತಯಂತ್ರಗಳಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಚುನಾವಣೆ ನಡೆಸಲು ಮೊದಲನೇ ಹಂತದ ರ್ಯಾಂಡಮೈಜೇಷನ್‍ನ್ನು ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ನಡೆಸಿದ್ದು ಶೇ.20ರಷ್ಟು ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಯಂತ್ರಗಳು ಮತ್ತು ಶೇ.30ರಷ್ಟು ವಿವಿಪ್ಯಾಟ್‍ಗಳನ್ನು ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಹೇಳಿದರು.
ಅವರು, ಶನಿವಾರ ನೂತನ ಜಿಲ್ಲಾಡಳಿತ ಕಚೇರಿಯ ಆವರಣದ ಪಕ್ಕದಲ್ಲಿರುವ ಚುನಾವಣಾ ಶಾಖೆ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಸಮಕ್ಷಮದಲ್ಲಿ ಹಮ್ಮಿಕೊಂಡಿದ್ದ ಮೊದಲನೇ ಹಂತದ ಮತಯಂತ್ರಗಳ ರ್ಯಾಂಡಮೈಜೇಷನ್ ಸಭೆಯಲ್ಲಿ ಮಾತನಾಡಿದರು.
 ಬಳ್ಳಾರಿ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, 1191 ಚುನಾವಣಾ ಮತಗಟ್ಟೆಗಳಿವೆ. ಮತಗಟ್ಟೆಗಳಿಗೆ ಅವಶ್ಯವಿರುವ 2445 (ಬ್ಯಾಲೆಟ್ ಯುನಿಟ್), 1716 (ಕಂಟ್ರೋಲ್ ಯುನಿಟ್) ಮತ್ತು 1857 (ವಿ.ವಿ.ಪ್ಯಾಟ್)ಗಳು ಸರಬರಾಜು ಆಗಿರುತ್ತವೆ. ಅವುಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ತಂತ್ರಜ್ಞರುಗಳಿಂದ ಮತ್ತು ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಈಗಾಗಲೇ ಪಥಮ ಹಂತದ ಪರಿಶೀಲನಾ ಕಾರ್ಯವನ್ನು ಮಾಡಲಾಗಿದೆ ಎಂದು ತಿಳಿಸಿದರು.
  ಇದರಲ್ಲಿ 2441 (ಬ್ಯಾಲೆಟ್ ಯುನಿಟ್), 1712 (ಕಂಟೋಲ್ ಯುನಿಟ್) ಮತ್ತು 1855 (ವಿ.ವಿ.ಪ್ಯಾಟ್)ಗಳು ಚುನಾವಣೆಗೆ ಸಿದ್ಧಗೊಂಡಿರುತ್ತವೆ. 4 (ಬ್ಯಾಲೆಟ್ ಯುನಿಟ್), 2 (ಕಂಟ್ರೋಲ್ ಯುನಿಟ್) ಮತ್ತು 2 (ವಿ.ವಿ.ಪ್ಯಾಟ್)ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಹಿಂದಿರುಗಿಸಲಾಗಿದೆ ಎಂದರು.
*ಮೊದಲ ಹಂತದ ರ್ಯಾಂಡಮೈಜೇಷನ್:* ಈಗಾಗಲೇ ಪ್ರಥಮ ಹಂತದ ಯಾದೃಚ್ಛಿಕರಣದಲ್ಲಿ ಶೇ.20 ರಷ್ಟು 1431 ಬ್ಯಾಲೆಟ್ ಯುನಿಟ್‍ಗಳಿವೆ. ಶೇ.20ರಷ್ಟು 1431 ಕಂಟ್ರೋಲ್ ಯುನಿಟ್‍ಗಳಿವೆ ಮತ್ತು ಶೇ.30ರಷ್ಟು 1550 ವಿವಿ ಪ್ಯಾಟ್‍ಗಳನ್ನು ಹೆಚ್ಚುವರಿಯಾಗಿ ಆಯಾ ಕ್ಷೇತ್ರಗಳಿಗೆ ತೆಗೆದಿಟ್ಟು ಒದಗಿಸಲಾಗುತ್ತದೆ. ಇವುಗಳನ್ನು ಮತದಾನದ ಸಂದರ್ಭದಲ್ಲಿ ಮತಯಂತ್ರಗಳಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಇವುಗಳನ್ನು ಬಳಸಿಕೊಳ್ಳಲು ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದರು.
ನಾಮಪತ್ರ ಸಲ್ಲಿಕೆಯಾದ ನಂತರ ಅಭ್ಯರ್ಥಿಗಳ ಸಮಕ್ಷಮದಲ್ಲಿ ಎರಡನೇ ಹಂತದ ಯಾದೃಚ್ಛೀಕರಣವು ನಡೆಯಲಿದೆ. ಆ ಹಂತದಲ್ಲಿ ಯಾವ ಮತಗಟ್ಟೆಗಳಿಗೆ ಯಾವ ಮಂತ್ರಗಳು ಎಂಬುದನ್ನು ಗುರುತಿಸಲಾಗುತ್ತದೆ. ನಂತರದಲ್ಲಿ  ನಿಯೋಜಿಸಿದ ಜಿಪಿಎಸ್‍ಯುಳ್ಳ ವಾಹನದಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತಾ ಕೊಠಡಿಗೆ ಕಳುಹಿಸಿಕೊಡಲಾಗುವುದು. ಮತ್ತು ಯಾದೃಚ್ಛಿಕರಣಕ್ಕೆ ಮೀಸಲಿಟ್ಟ ಚುನಾವಣಾ ಯಂತ್ರಗಳನ್ನು ಮತದಾನದ ವೇಳೆ ಮಂತ್ರಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬಂದರೆ ನಿಯೋಜಿಸಿದ ಆಯಾ ಸೆಕ್ಟರ್ ಅಧಿಕಾರಿಗಳಿಂದ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರುಗಳು ಮತ್ತು ಕ್ಷೇತ್ರ ಚುನಾವಣಾಧಿಕಾರಿಗಳು ಚುನಾವಣಾ ಶಾಖೆಯಲ್ಲಿ ಸಂಗ್ರಹಿಸಿಡಲಾದ ಈಗಾಗಲೇ ಮೊದಲ ಹಂತದಲ್ಲಿ ಪರಿಶೀಲಿಸಲಾದ ಮತಯಂತ್ರಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಹಾಗೂ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.