ಹೆಚ್ಚುವರಿ ಲಸಿಕೆ ತಳ್ಳಿಹಾಕಿದ ತಜ್ಞರು:ಎಲ್ಲರಿಗೂ ಲಸಿಕೆ ಹಾಕುವುದುಮುಖ್ಯ

ನವದೆಹಲಿ, ನ. 21- ದೇಶದಲ್ಲಿ ಕೊರೊನಾ ಸೋಂಕು ತಡೆಗೆ ಹೆಚ್ಚುವರಿ ಲಸಿಕೆ ಹಾಕುವುದನ್ನು ತಜ್ಞರು ತಳ್ಳಿಹಾಕಿದ್ದಾರೆ.

ಮೊದಲು ದೇಶದ ಎಲ್ಲ ಅರ್ಹ ನಾಗರಿಕರಿಗೆ ಲಸಿಕೆ ನೀಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಹೆಚ್ಚುವರಿ ಲಸಿಕೆ ನೀಡಿಕೆ ಅಗತ್ಯ ಇಲ್ಲ. ಮೊದಲು ಲಸಿಕೆ ಇನ್ನೂ ಪಡೆಯದ ಮಂದಿಗೆ ಲಸಿಕೆ ನೀಡುವ ಕುರಿತು ಗಮನ ಹರಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಇನ್ನೂ ಶೇಕಡ 80ರಷ್ಟು ಮಂದಿ ಯುವಜನರು ಮಾತ್ರ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಲಸಿಕೆ ಪಡೆದಿಲ್ಲ ಜೊತೆಗೆ ಮೊದಲ ಡೋಸ್ ಲಸಿಕೆ ಪಡೆಯದ ಅನೇಕ ಜನರು ದೇಶದಲ್ಲಿ ಇದ್ದಾರೆ ಇಂಥವರಿಗೆ ಲಸಿಕೆ ನೀಡುವ ಕಾರ್ಯ ಮೊದಲು ಆಗಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ತಜ್ಞರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.

ದೇಶದಲ್ಲಿ ಇದುವರೆಗೂ 116 ಕೋಟಿ ಡೋಸ್ ಲಸಿಕೆ ಮಾತ್ರ ನೀಡಲಾಗಿದೆ 135 ಕೋಟಿಗೂ ಹೆಚ್ಚು ಜನರಿರುವ ದೇಶದಲ್ಲಿ ಎಲ್ಲರಿಗೂ ಸಂಪೂರ್ಣ ಲಸಿಕೆ ನೀಡಿಕೆ ಆಗಬೇಕೆಂದರೆ 270 ಕೋಟಿ ಗೂ ಹೆಚ್ಚು ಲಸಿಕೆ ನೀಡಬೇಕಾಗಿದೆ ಮೊದಲು ಈ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಯತ್ನ ಮಾಡಬೇಕು ಎಂದು ಹೇಳಿದೆ.

ಮೊದಲ ಮತ್ತು ಎರಡನೇ ಡೋಸ್ ಲಸಿಕೆಯನ್ನು ದೇಶದ ಎಲ್ಲಾ ಅರ್ಹ ಜನರಿಗೆ ನೀಡಿದ ನಂತರ ಹೆಚ್ಚುವರಿ ಲಸಿಕೆ ನೀಡಿಕೆಯ ಕುರಿತು ಯಾವುದಾದರೂ ನಿರ್ಧಾರಕ್ಕೆ ಬರಬಹುದು ಆದರೆ ದೇಶದಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಇನ್ನೂ ಪೂರ್ಣವಾಗದ ಹಿನ್ನೆಲೆಯಲ್ಲಿ ಈಗಲೇ ಹೆಚ್ಚುವರಿ ಲಸಿಕೆಯ ಬಗ್ಗೆ ಮಾತನಾಡುವುದು ಇಲ್ಲವೇ ಅದು ಬೇಕು ಎಂದು ಹೇಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ದೇಶದಲ್ಲಿ ಮೊದಲು ಎಲ್ಲಾ ಜನರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಒತ್ತು ನೀಡುವ ಅಗತ್ಯವಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಕೂಡ ಸಲಹೆ ನೀಡಲಾಗಿದೆ