
ಕಲಬುರಗಿ,ಆ.4-ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿ ತಾಲ್ಲೂಕಿನ ಹಡಗಿಲ್ ಹಾರುತಿ ಗ್ರಾಮದ ಬಳಿ ಇಂದು ನಡೆದಿದೆ.
ನಗರದ ಸೂಪರ್ ಮಾರ್ಕೆಟ್‍ನಿಂದ ಮೇಳಕುಂದಾ (ಬಿ) ಗ್ರಾಮಕ್ಕೆ ಸಂಚರಿಸುವ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಇದರಿಂದ ಕೆಲಕಾಲ ಬಸ್ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಸೂಪರ್ ಮಾರ್ಕೆಟ್‍ನಿಂದ ಮೇಳಕುಂದಾ (ಬಿ) ಗ್ರಾಮಕ್ಕೆ ಸಂಚಿರಿಸುವ ಬಸ್ ಮೇಳಕುಂದಾ (ಬಿ) ಗ್ರಾಮದಲ್ಲಿಯೇ ಭರ್ತಿಯಾಗಿ ಬರುತ್ತಿದ್ದು, ಇದರಿಂದ ಮೇಳಕುಂದಾ (ಕೆ), ಹಡಗಿಲ್ ಹಾರುತಿ, ಶರಣಸಿರಸಗಿ ಗ್ರಾಮಗಳಿಂದ ಕಲಬುರಗಿ ನಗರಕ್ಕೆ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ನಿಲ್ಲಲೂ ಸಹ ಜಾಗ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಈ ಮೊದಲು ಸೂಪರ್ ಮಾರ್ಕೆಟ್‍ನಿಂದ ಮೇಳಕುಂದಾ ಗ್ರಾಮಕ್ಕೆ ಎರಡು ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಳಿಗೆ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಒಂದೇ ಬಸ್ ಸಂಚರಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಬಸ್ ಸೌಕರ್ಯದ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಹಡಗಿಲ್ ಹಾರುತಿ ಗ್ರಾಮಸ್ಥರು ಆಗ್ರಹಿಸಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಬಗ್ಗೆ ನಿಗಾ ವಹಿಸಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಮೇಳಕುಂದಾ (ಬಿ), ಮೇಳಕುಂದಾ (ಕೆ), ಹಡಗಿಲ್ ಹಾರುತಿ ಮತ್ತು ಶರಣಸಿರಸಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.