ಹೆಚ್ಚುವರಿ ಪಿಂಚಣಿಗಾಗಿ ನಿವೃತ್ತ ನೌಕರರ ಹೋರಾಟ

ದಾವಣಗೆರೆ.ಮಾ.೧೫: ನಿವೃತ್ತ ಪಿಂಚಣಿ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ೪ ತಿಂಗಳ ಗಡುವು ನೀಡಿದ್ದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇಪಿಎಸ್ ೯೫ ರಾಷ್ಟ್ರೀಯ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ದಾವಣಗೆರೆಯ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಕೆ.ಎಂ. ಮರುಳಸಿದ್ಧಯ್ಯ ಮಾತನಾಡಿ ಕಳೆದ ನವೆಂಬರ್ ೨೬ರಂದು ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ರಾಜ್ಯ ಮಟ್ಟದ ನಿವೃತ್ತ ನೌಕರರ ಸಮಾವೇಶವನ್ನು ರಾಷ್ಟ್ರಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಸಮಾವೇಶದಲ್ಲಿ ಹೆಚ್ಚುವರಿ ಪಿಂಚಣಿಗೆ ಒತ್ತಾಯಿಸಲಾಗಿತ್ತು. ಆದರೆ ಪಿ.ಎಫ್. ಸಂಸ್ಥೆ ನ್ಯಾಯಾಲಯದ ಆದೇಶ ಪರಿಗಣಿಸಿ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ನೀಡಿಲ್ಲ ಎಂದು ದೂರಿದರು.
ನ್ಯಾಯಾಲಯ ನೀಡಿದ್ದ ೪ ತಿಂಗಳ ಗಡುವು ಮುಗಿದಿದ್ದರೂ ಕೂಡ ಯಾವುದೇ ಕ್ರಮ ವಹಿಸಿಲ್ಲ.ಇದಲ್ಲದೇ ನಮಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಕೂಡ ದೊರೆತಿಲ್ಲ.
ಮೂವತ್ತು ವರ್ಷ ಕೆಲಸ ಮಾಡಿದ್ದರೂ ಕೇವಲ ೨,೬೦೦ ರೂಪಾಯಿ ಮಾತ್ರ ಪಿಂಚಣಿ ನೀಡಲಾಗುತ್ತಿದ್ದು, ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಕನಿಷ್ಠ ೭,೫೦೦ ರೂಪಾಯಿ ಹಾಗೂ ಡಿಎ ನೀಡಬೇಕು ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು ಎಂಬುದನ್ನು ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ನಮ್ಮದೇ ಪಿಎಫ್ ಹಣ ೫ಲಕ್ಷ ಕೋಟಿ ರೂಪಾಯಿಗೂ ಅಧಿಕವಿದೆ. ಅದಕ್ಕೆ ಬರುವ ಬಡ್ಡಿ ಹಣವನ್ನು ಹೆಚ್ಚುವರಿ ಪಿಂಚಣಿ ನೀಡಿದರೂ ಆಗುತ್ತದೆ ಆದ್ದರಿಂದ ಸರ್ಕಾರ ನಿವೃತ್ತರ ಅಳಲು ಆಲಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಟಿ. ಮಂಜುನಾಥ್ ಪುಟಗನಾಳ್, ಮಲ್ಲಿಕಾರ್ಜುನಯ್ಯ ತಂಗಡಗಿ, ಎಂ. ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.