ಹೆಚ್ಚುವರಿ ಅನುದಾನ ಕಲ್ಪಿಸಲು ಮನವಿ

ಶಿರಹಟ್ಟಿ,ಜು.26: ಪಟ್ಟಣದ ಹೃದಯ ಭಾಗದಲ್ಲಿರುವ ಲೋಕಮಾನ್ಯ ತಿಲಕ ಗ್ರಂಥಾಲಯದ ಪ್ರಥಮ ಅಂತಸ್ತಿನ ಕಟ್ಟಡದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಎರಡನೇ ಅಂತಸ್ತಿನ ಕಟ್ಟಡ ಪ್ರಾರಂಭಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆ ಅಧ್ಯಕ್ಷ ಹಸನ್ ತಹಶೀಲ್ದಾರ ಮಾತನಾಡಿ ಗ್ರಂಥಾಲಯವು ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ನಿತ್ಯ ನೂರಾರು ಸಾಹಿತಿಗಳು, ಓದುಗರು ಬರುತ್ತಾರೆ. ಮತ್ತು ಗ್ರಂಥಾಲಯದ ಪಕ್ಕದಲ್ಲೇ ಎರಡು ಶಾಲೆ ಇರುವುದರಿಂದ ಶಾಲಾ ಮಕ್ಕಳು ಸಹ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದಲು ಬರುತ್ತಾರೆ. ಹೀಗಾಗಿ ಓದುಗ ಮನಸ್ಸುಗಳಿಗೆ ಸುಸಜ್ಜಿತ ಗ್ರಂಥಾಲಯ ಕಲ್ಪಿಸುವುದು ಅತ್ಯಂತ ಅನಿವಾರ್ಯ. ಪಟ್ಟಣದಲ್ಲಿ ಸಾಕಷ್ಟು ಮಹಿಳಾ ಸಾಹಿತಿಗಳು ಇರುವುದರಿಂದ ಅವರಿಗೆ ಸಾರ್ವಜನಿಕರ ಮಧ್ಯೆ ಓದಲು ಕಿರಿಕಿರಿಯಾಗುತ್ತದೆ. ಆದ್ದರಿಂದ ಎರಡನೇ ಅಂತಸ್ತು ನಿರ್ಮಿಸುವುದರ ಮೂಲಕ ಮಹಿಳಾ ಸಾಹಿತಿಗಳಿಗೆ ಓದಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಶರೀಫ ಗುಡಿಮನಿ, ಮಹಬೂಬ ಅತ್ತಾರ, ಕಳಕಪ್ಪ ಬಿಸನಳ್ಳಿ, ಮುತ್ತು ಗುಡಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.