ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆ: ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಏರಿಕೆ, ಚಿಕಿತ್ಸಾ ಶುಲ್ಕ ಇಳಿಕೆಗೆ ಕ್ರಮ: ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್

ವಿಜಯಪುರ, ಏ.22-ಕರೋನಾ ಎರಡನೇ ಅಲೆಯಿಂದಾಗಿ ತತ್ತರಿಸಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲು ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ ಹಾಗೂ ಚಿಕಿತ್ಸಾ ವೆಚ್ಚದಲ್ಲಿ ತೀವ್ರ ಕಡಿತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿರ್ಣಯವನ್ನು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ.
ಕರೋನಾ ಹೆಚ್ಚುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್‍ಗಳು ದೊರಕುತ್ತಿಲ್ಲ, ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ವ್ಯಾಪಕ ಕೂಗು ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂದು ಬಿ.ಎಲ್.ಡಿ.ಇ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ವೈದ್ಯರ ತುರ್ತು ಸಭೆ ನಡೆಸಿದ ಎಂ.ಬಿ.ಪಾಟೀಲರವರು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ 250 ಬೆಡ್‍ಗಳಿಗೆ ಮೀಸಲಾಗಿದ್ದ ಕೊರೋನಾ ಹಾಸಿಗೆಗಳ ಸಂಖ್ಯೆಯನ್ನು 500ಕ್ಕೆ ವಿಸ್ತರಣೆ ಮಾಡಲಾಗಿದ್ದು, ಇದರಲ್ಲಿ ಜನರಲ್ ವಾರ್ಡನಲ್ಲಿ 200, ಐ.ಸಿ.ಯು ನಲ್ಲಿ 50, ಮತ್ತು ಸ್ಪೆಷಲ್ ರೂಂಗಳಲ್ಲಿ 50 ಒಟ್ಟು 300 ಆಕ್ಸಿಜನ್ ಬೆಡ್‍ಗಳು ಲಭ್ಯವಿದೆ. ಅಲ್ಲದೇ 200 ಐಸೊಲೇಶನ್ ಬೆಡ್‍ಗಳು ರೋಗಿಗಳಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತಲೂ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಶೇ.70 ಕಡಿಮೆ ಶುಲ್ಕವನ್ನು ಕಳೆದ 2 ತಿಂಗಳಿಂದಲೂ ಪಡೆಯಲಾಗುತ್ತಿದೆ. ಇದೀಗ ಕರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಬಡವರಿಗೆ, ಜನಸಾಮಾನ್ಯರಿಗೆ ಅನಕೂಲವಾಗಲಿ ಎಂಬ ಕಾರಣದಿಂದ ರಿಯಾಯಿತಿ ಶುಲ್ಕವನ್ನು ಮುಂದುವರೆಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಂ.ಬಿ.ಪಾಟೀಲ ಹೇಳಿದ್ದಾರೆ.
ರಾಜ್ಯ ಸರಕಾರ ಜನರಲ್ ವಾರ್ಡ್‍ಗಳಲ್ಲಿ ಆಕ್ಸಿಜನ್ ರಹಿತ ಬೆಡ್‍ಗೆ ರೂ. 10 ಸಾವಿರ ನಿಗದಿಪಡಿಸಿದ್ದರೆ ಬಿ.ಎಲ್.ಡಿ.ಇ ಯಲ್ಲಿ ರೂ.3 ಸಾವಿರ, ಆಕ್ಸಿಜನ್ ಸಹಿತ ಬೆಡ್‍ಗೆ ಸರಕಾರ ನಿಗದಿಪಡಿಸಿದ ರೂ. 12ಸಾವಿರ ಬದಲಾಗಿ ಇಲ್ಲಿ ರೂ. 5ಸಾವಿರ ಹಾಗೂ ಐ.ಸಿ.ಯುನಲ್ಲಿ ವೆಂಟಿಲೆಟರ್‍ಗೆ ರೂ. 25ಸಾವಿರ ನಿಗದಿತ ವೆಚ್ಚದ ಬದಲಾಗಿ ರೂ.8ಸಾವಿರ ರೂಪಾಯಿಗಳನ್ನು ಮಾತ್ರ ಪಡೆಯಲಾಗುತ್ತಿದೆ ಎಂದಿರುವ ಅವರು ಸದ್ಯ ಆಸ್ಪತ್ರೆಯ 1100 ಹಾಸಿಗೆಗಳಲ್ಲಿ 500 ಪ್ರತ್ಯೇಕ ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದ್ದು, ಸಿ.ಟಿ ಸ್ಕ್ಯಾನ್ ಸೇರಿದಂತೆ ಎಲ್ಲ ಹೆಚ್ಚಿನ ತಪಾಸಣೆಗಳು ಹಾಗೂ ನಿರಂತರ ವೈದ್ಯರ ಸೇವೆಯನ್ನು ಒಂದೇ ಕಡೆ ಒದಗಿಸಲಾಗಿದ್ದು, ರೆಮೆಡಿಶಿವಿರ್ ಇಂಜೆಕ್ಷನ್ ಸೇರಿದಂತೆ ಎಲ್ಲ ತುರ್ತು ಔಷಧಗಳು ಇಲ್ಲಿನ ರೋಗಿಗಳಿಗೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾನ್ ಕೋವಿಡ್ ರೋಗಿಗಳ ಚಿಕಿತ್ಸೆ ಮುಂದುವರಿಕೆಃ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ 1100 ಹಾಸಿಗೆಗಳಲ್ಲಿ ಕೋವಿಡ್‍ಗೆ ಕಾಯ್ದಿರಿಸಿದ 500 ಹಾಸಿಗೆಗಳನ್ನು ಹೊರತುಪಡಿಸಿ ಉಳಿದ 600 ಹಾಸಿಗೆಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ಮುಂದುವರೆದಿದ್ದು, ಡೆಲಿವರಿ, ಮಕ್ಕಳ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆದಿದ್ದು, ಸಾಮಾನ್ಯ ವಾರ್ಡಗಳಿಗೆ ದಾಖಲಾಗುವ ಎಲ್ಲ ನಾನ್ ಕೋವಿಡ್ ರೋಗಿಗಳಿಗೆ ಹಾಸಿಗೆ ಶುಲ್ಕ, ಊಟ, ಔಷಧ, ಶಸ್ತ್ರ ಚಿಕಿತ್ಸೆಗಳು ಹಾಗೂ ಸಾಮಾನ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿವೆ. ಇದು ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಹಿಡಿದು ಎಲ್ಲ ವಿಭಾಗಗಳಲ್ಲಿ ದಾಖಲಾಗುವ ಎಲ್ಲ ಸಾಮಾನ್ಯ ವಿಭಾಗದ ರೋಗಿಗಳಿಗೆ ಅನ್ವಯಿಸುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸಭೆಯಲ್ಲಿ ಉಪಕುಲಪತಿ ಡಾ.ಎಂ.ಎಸ್.ಬಿರಾದಾರ. ಸಮಕುಲಪತಿ ಡಾ.ಆರ್.ಎಸ್.ಮುಧೋಳ. ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯರು ಡಾ. ಅರವಿಂದ ಪಾಟೀಲ್. ಆಸ್ಪತ್ರೆಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಸಂಸ್ಥೆ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.