ಹೆಚ್ಚುತ್ತಿರುವ ಕೊರೊನಾ : ಮಾಸ್ಕ್ ಕಡ್ಡಾಯಕ್ಕೆ ಶಿಫಾರಸ್ಸು ಅಡ್ಡಿ

ರಾಯಚೂರು.ಮಾ.26- ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಕಟ್ಟುನಿಟ್ಟಿನ ಕಾನೂನು ಅನುಷ್ಠಾನಕ್ಕೆ ಸ್ಥಳೀಯ ರಾಜಕಾರಣಿಗಳ ಶಿಫಾರಸ್ಸು ದಂಡ ವಿಧಿಸುವ ಪ್ರಕ್ರಿಯೆಗೆ ಅಡ್ಡಿಯಾಗಿ ಕೊರೊನಾ ಮಾಸ್ಕ್ ಧರಿಸುವ ಜಾಗೃತಿ ಹಳ್ಳ ಹಿಡಿಯುವಂತಾಗಿದೆ.
ಕಳೆದ ಒಂದು ವಾರದಿಂದ ರಾಜ್ಯದ ಅಕ್ಕಪಕ್ಕದ ಗಡಿ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಮತ್ತು ರಾಜ್ಯದಲ್ಲೂ ಸಂಖ್ಯೆ ಹೆಚ್ಚಳದ ಆತಂಕದಿಂದ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯ. ಇಲ್ಲದಿದ್ದರೇ, ದಂಡ ಎನ್ನುವ ನಿಯಮದ ಹಿನ್ನೆಲೆಯಲ್ಲಿ ಪೊಲೀಸ್ ಸೇರಿದಂತೆ ನಗರಸಭೆಗೆ ನೀಡಿದ ಸೂಚನೆ ಅನ್ವಯ ತಪಾಸಣೆ ತೀವ್ರಗೊಳಿಸಲಾಗಿದೆ. ಆದರೆ, ದಂಡ ವಿಧಿಸುವ ಪ್ರಕ್ರಿಯೆಗೆ ಸ್ವತಃ ಜನಪ್ರತಿನಿಧಿಗಳ ಶಿಫಾರಸ್ಸಿನ ಕಿರಿಕಿರಿಗೆ ಪೊಲೀಸರನ್ನು ದಂಗಾಗುವಂತೆ ಮಾಡಿದೆ.
ದಂಡ ವಿಧಿಸಲೇಬೇಕು ಎನ್ನುವ ಅಧಿಕಾರಿಗಳಿಂದ ಆದೇಶ, ಬಿಟ್ಟು ಬಿಡಿ ಎನ್ನುವುದು ರಾಜಕಾರಣಿಗಳ ಒತ್ತಡದ ಮಧ್ಯೆ ಪೊಲೀಸರು ತೀವ್ರ ತಳಮಳಕ್ಕೆಡೆಯಾಗಿದ್ದಾರೆ. ಆದರೂ, ಕಳೆದ ಎರಡು ದಿನಗಳಿಂದ ಮಾಸ್ಕ್ ಧರಿಸದವರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆ ತೀವ್ರಗೊಂಡಿದೆ. ಅನೇಕ ಕಡೆ ಪೊಲೀಸ್ ತಂ‌ಡಗಳು ಕಾವಲು ನಿಂತು ಮಾಸ್ಕ್‌ಧಾರೆಣೆ ಪರಿಶೀಲನೆಯಲ್ಲಿ ತೊಡಗಿವೆ. ಜಿಲ್ಲೆಯಲ್ಲಿಯೂ ಕೊರೊನಾ ಎರಡಂಕಿಗೆ ಜಿಗಿದಿರುವುದು ಆತಂಕಕ್ಕೆ ದಾರಿ ಮಾಡಿದೆ.
ಕಳೆದ ಮೂರು, ನಾಲ್ಕು ತಿಂಗಳಿಂದ ಕೊರೊನಾ ಪ್ರಕರಣಗಳ ಕುಸಿತದ ಹಿನ್ನೆಲೆಯಲ್ಲಿ ಜನ ನೆಮ್ಮದಿಯಿಂದ ನೀರಾಳವಾಗಿ ಓಡಾಡುತ್ತಿದ್ದರು. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಮತ್ತೇ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಕೋವಿಡ್ ಕಟ್ಟುನಿಟ್ಟನ ನಿಯಮಗಳು ಅನುಷ್ಠಾನಗೊಳಿಸಲಾಗುತ್ತಿದ. ಕಳೆದ ಮೂರು, ನಾಲ್ಕು ದಿನಗಳಲ್ಲಿ 50 ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.
ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ತೀವ್ರಗೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಹೆಚ್ಚಿನ ಗಮನ ನೀಡಲಾಗುತ್ತದೆ. ಜಿಲ್ಲೆಯಾದ್ಯಂತ ಮಾಸ್ಕ್ ದಂಡ ವಿಧಿಸುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ.