ಹೆಚ್ಚಿನ ಹಣಕ್ಕೆ ಧಮ್ಕಿ ರೌಡಿ ಪಾಯಸ ರಾಮ ಸೆರೆ

ಬೆಂಗಳೂರು,ಏ.೧೮-ಖಾಸಗಿ ಸಂಸ್ಥೆ ಕೇಬಲ್ ಮತ್ತು ಇಂಟರ್‌ನೆಟ್ ಕನೆಕ್ಷನ್ ಹಾಕಲು ದುಪ್ಪಟ್ಟು ಹಣ ಕೊಡುವಂತೆ ಸಿಬ್ಬಂದಿಗೆ ಧಮ್ಕಿ ಹಾಕಿದ ರೌಡಿ ಪಾಯಸ ರಾಮ ಅಲಿಯಾಸ್ ರಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಡಬಗೆರೆಯ ಪಾಯಸ ರಾಮ ಅಲಿಯಾಸ್ ರಾಮಣ್ಣ ಕೇಬಲ್ ಹಾಗೂ ಇಂಟರ್‌ನೆಟ್ ಕನೆಕ್ಷನ್ ವ್ಯವಹಾರ ಮಾಡುತ್ತಿದ್ದು ಕಡಬಗೆರೆಯ ಬಳಿ ಖಾಸಗಿ ಸಂಸ್ಥೆಯೊಂದು ಮನೆಗಳಿಗೆ ಕೇಬಲ್ ಮತ್ತು ಇಂಟರ್‌ನೆಟ್ ಕನೆಕ್ಷನ್ ಹಾಕುತ್ತಿದ್ದು ಹೆಚ್ಚಿನ ಹಣಕ್ಕೆ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಕಳೆದ ಮಾ. ೨೬ ರಂದು ಕಡಬಗೆರೆಯಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ಕೇಬಲ್ ಕನೆಕ್ಷನ್ ಹಾಕುವಾಗ ಪಾಯಸ ರಾಮ ಮತ್ತು ಈರಣ್ಣ ಕೆಲಸಕ್ಕೆ ಅಡಿಪಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಖಾಸಗಿ ಸಂಸ್ಥೆ ೯೦೦ ರೂಪಾಯಿ ಕನೆಕ್ಷನ್ ಕೊಡುತ್ತಿದ್ದು, ಅದರ ಬದಲಿಗೆ ೨,೧೦೦ ರೂಪಾಯಿಗೆ ಕೊಡುವಂತೆ ಧಮ್ಕಿ ಹಾಕಿದ್ದಾರೆ.
ಧಮ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಸಿಬ್ಬಂದಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಹಿನ್ನೆಲೆ ಆರೋಪಿ ಪಾಯಸ ರಾಮನನ್ನ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.