ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೇ ಕಾನೂನು ಕ್ರಮ

ಬ್ಯಾಡಗಿ,ಏ30: ತಾಲೂಕಿನಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಮತ್ತು ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಸಮಿಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು, ಬ್ಯಾಡಗಿ ಇವರ ಕಾರ್ಯಾಲಯವನ್ನು ಸಂಪರ್ಕಿಸಿ ದೂರು ಸಲ್ಲಿಸಲು ಕೋರಿದ್ದಾರೆ. ರೈತರು ರಸಗೊಬ್ಬರ ಖರೀದಿಸುವಾಗ ರಸಗೊಬ್ಬರ ಚೀಲದ ಮೇಲೆ ಮುದ್ರಿತ ದರ ಗಮನಿಸಿ ಖರೀದಿಸಬೇಕು. ರಸಗೊಬ್ಬರ ಮಾರಾಟಾಗಾರರು ಚೀಲದ ಮೇಲೆ ಮುದ್ರಿತ ಧಾರಣೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಛೇರಿ ಸಂಪರ್ಕಿಸಿ ದೂರು ನೀಡಬಹುದು. ಮತ್ತು ರೈತರು ಗರಿಷ್ಠ ಚಿಲ್ಲರೆ ಮಾರಾಟ ದರದಲ್ಲಿಯೇ ರಸಗೊಬ್ಬರ ಖರೀದಿ ಮಾಡಬೇಕೆಂದು ತಿಳಿಸಿದ್ದಾರೆ.

ದರ ಏರಿಕೆಯ ನೆಪ ಬೇಡ..!!

ಏಪ್ರೀಲ್ 1 ರಿಂದ ರಸಗೊಬ್ಬರ ದರ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಹಾಲಿ ಲಭ್ಯವಿರುವ ದಾಸ್ತಾನಿನ ರಸಗೊಬ್ಬರ ಚೀಲದ ಮೇಲಿನ ಮುದ್ರಿತ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ, ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ಪರವಾನಿಗೆ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನು ತಾವು ನೀಡಿದ್ದು, ಮಾರಾಟಗಾರರು ತಮ್ಮ ಅಂಗಡಿಯಿಂದ ಮಾರಾಟ ಮಾಡಿದ ರಸಗೊಬ್ಬರಗಳಿಗೆ ಕಡ್ಡಾಯವಾಗಿ ಬಿಲ್ ನೀಡಲು ಸೂಚಿಸಲಾಗಿದೆಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.