ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ: ಎಂ.ವೈ. ಪಾಟೀಲ

ಅಫಜಲಪೂರ:ನ.21:ಕೊರೊನಾ ಹಾಗೂ ಪ್ರವಾಹದಿಂದ ಈ ವರ್ಷ ಜನರ ಜೀವನ ತತ್ತರಿಸಿ ಹೋಗಿದ್ದು ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದ್ದು ಸರ್ಕಾರ ಕೊಡುವ ಪರಿಹಾರ ಕಡಿಮೆಯಾಗಿದೆ ಇನ್ನೂ ಹೆಚ್ಚಿನ ಪರಿಹಾರ ಕೊಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಎಂ .ವೈ. ಪಾಟೀಲ ಹೇಳಿದರು.

ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರುಕ್ಮೀಣಿ ಹೊನ್ನಕೇರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಅಫಜಲಪೂರ ಪಟ್ಟಣದ ನಿವಾಸಿಗಳು ಮನೆ ಮನೆಗೆ ನೀರು ಪೂರೈಕೆಗೆ 72 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆ ಪ್ರವಾಹ ಸಂಧರ್ಭದಲ್ಲಿ 14 ಹಳ್ಳಿಗಳು ಸ್ಥಳಾಂತರ ಮಾಡಲಾಗಿದ್ದು, ಇದೀಗ 34 ಹಳ್ಳಿಗಳು ಸ್ಥಳಾಂತರಕ್ಕೆ ಮಾಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ತಾಪಂ ಅಧ್ಯಕ್ಷೆ ರುಕ್ಮೀಣಿ ಹೊನ್ನಕೇರಿ ಮಾತನಾಡಿ, ಪ್ರವಾಹದಿಂದ ಮನೆಗಳು ಕಳೆದುಕೊಂಡವರಿಗೆ ಸರಕಾರದಿಂದ ಮನೆಗಳು ಮಂಜೂರು ಮಾಡಲಾಗುತ್ತಿದೆ. ಇದಕ್ಕೆ ತಾಪಂ ವತಿಯಿಂದ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದರು.

ಕೃಷಿ ಇಲಾಖೆ ಅಧಿಕಾರಿ ಎಸ್.ಎಸ್. ಗಡಗಿಮನಿ ಸಭೆಗೆ ಮಾಹಿತಿ ನೀಡಿ, ಈ ಬಾರಿ ಭೀಮಾ ನದಿ ಪ್ರವಾಹದಿಂದ ತಾಲೂಕಿನಲ್ಲಿ ಒಟ್ಟು 44269 ಸಾವಿರ ಹೆಕ್ಟರ ಬೆಳೆ ಹಾಳಾಗಿದೆ. ಕಂದಾಯ ಇಲಾಖೆಗೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ಈಗಾಗಲೇ ಸರಕಾರಕ್ಕೆ ಮಾಹಿತಿ ಕಳುಹಿಸಲಾಗಿದ್ದು, ಪರಿಹಾರದ ನಿರೀಕ್ಷೇಯಲ್ಲಿರುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕೊರೊನಾ ಹಿನ್ನಲೆಯಲ್ಲಿ ಸರಕಾರದ ಆದೇಶ ಮೇರೆಗೆ ಮುಚ್ಚಿವೆ. ಆದರೆ ಇನ್ನೂ ಶಾಲೆ ಪ್ರಾರಂಭ ಬಗ್ಗೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಕರಜಗಿ ಕರ್ನಾಟಕ ಪಬ್ಲಿಕ ಶಾಲೆಗೆ ಸ್ಥಳ ಲಭ್ಯವಾಗಿದ್ದು, ಶೀಘ್ರದಲ್ಲಿ ಹೊಸ ಕಟ್ಟಡ ಪ್ರಾರಂಭಿಸಿಲಾಗುವುದು ಎಂದು ಹೇಳಿದರು.

ನನ್ನ ಊರು ನನ್ನ ಬೇರು ಎಂಬ ತಾಲೂಕಿನ ಗ್ರಾಪಂ ವ್ಯಾಪ್ತಿಯ ಐತಿಹಾಸಿಕ ಸ್ಥಳದ ಬಗ್ಗೆ ಮಾಹಿತಿ ಪುಸ್ತಕವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಬಿಡುಗಡೆ ಮಾಡಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಬಿಲಾಲ, ತಾಪಂ ಸದ್ಯಸರಾದ ಶಂಕರಗೌಡ ಪಾಟೀಲ್, ವಿಠ್ಠಲ್ ನಾಟೀಕಾರ್, ಮಾಪಣ್ಣ ಸಾಯಬಣ್ಣ ಭಗವಂತ ಜಕಬಾ, ರಾಜಕುಮಾರ ಬಬಲಾದ, ವಸಂತರಾವ ಚುತ್ಪೂರ, ಕಲ್ಲಪ್ಪ ಪ್ಯಾಟಿ, ಬಾನುಬೇಗಂ ಮುತವಲ್ಲಿ, ಅನುಸುಬಾಯಿ ಮೋತಿರಾಮ, ಲಕ್ಷ್ಮೀಬಾಯಿ ಅಲ್ಲದ, ಅಂಬಿಕಾ ನಿಂಗಪ್ಪ, ಕೃಷ್ಣಬಾಯಿ ಡೊಂಗರಿ, ಅಧಿಕಾರಿಗಳಾದ ಚೇತನ ಗುರಿಕಾರ, ವಿಜಯಕುಮಾರ ಕುದರಿ ಸರ್ವಜ್ಞ ಪೂಜಾರಿ ಶಂಕರಗೌಡ ಇದ್ದರು.