ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ

ಚಿತ್ರದುರ್ಗ,ಏ.೧೮; ಜಿಲ್ಲೆಯ ಖಾಸಗಿ ಹಾಗೂ ಸಹಕಾರಿ ರಸಗೊಬ್ಬರ ಮಾರಾಟಗಾರರು ರಸಗೊಬ್ಬರದ ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ ದರಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ತಿಳಿಸಿದ್ದಾರೆ.
 ರೈತ ಬಾಂಧವರು ಸಹ ರಸಗೊಬ್ಬರ ಚೀಲಗಳ ಮೇಲೆ ಮುದ್ರಿತ ದರಗಳನ್ನು ಗಮನಿಸಿ ಖರೀದಿಸಲು ಸಲಹೆ ನೀಡಿದೆ. ರಸಗೊಬ್ಬರ ಮಾರಾಟಗಾರರು ತಮ್ಮ ಮಳಿಗೆಗಳ ಮುಂಭಾಗದಲ್ಲಿ ಸಂಸ್ಥೆವಾರು ದಾಸ್ತಾನಿರುವ ರಸಗೊಬ್ಬರದ ಪ್ರಮಾಣವನ್ನು ಮತ್ತ ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವ ಹಾಗೆ ಪ್ರದರ್ಶಿಸುವುದು. ರೈತ ಬಾಂಧವರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್‍ನ್ನು ಸಲ್ಲಿಸಲು ಕೋರಿದೆ. ರಸಗೊಬ್ಬರ ಮಾರಾಟಗಾರರು ಪಿಓಎಸ್ ಯಮತ್ರದ ಮುಖೇನ ಮಾರಾಟ ಮಾಡುವುದು ಹಾಗೂ ನಿಗಧಿತ ನಮೂನೆಯಲ್ಲಿ ರಶೀದಿಗಳನ್ನು ನೀಡಲು ತಿಳಿಸಿದೆ.
 ಯಾವುದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದ ಮೇಲೆ ಮುದ್ರಿತ ಧಾರಣೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ದೂರು ನೀಡುವುದು.
ರಸಗೊಬ್ಬರ ಮಾರಾಟಗಾರರು ಏಪ್ರಿಲ್ 1 ರಿಂದ ರಸಗೊಬ್ಬರ ಧಾರಣೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಹಾಲಿ ಲಭ್ಯವಿರುವ ದಾಸ್ತಾನಿನ ರಸಗೊಬ್ಬರವನ್ನು ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ. ರೈತ ಬಾಂಧವರು ಎಂ.ಆರ್.ಪಿ ದರದಲ್ಲಿಯೇ ರಸಗೊಬ್ಬರ ಖರೀದಿಯನ್ನು ಕೈಗೊಳ್ಳುವಂತೆ ಕೋರಿದೆ.