ಹೆಚ್ಚಿನ ದರಕ್ಕೆ ಗೊಬ್ಬರ-ಬೀಜ ಮಾರಾಟ ಮಾಡಿದರೆ ಕಠಿಣ ಕ್ರಮ

ದಾವಣಗೆರೆ,ಜೂ.8: ಬಿತ್ತನೆ ಬೀಜ ಮತ್ತು ರಸ ಗೊಬ್ಬರವನ್ನು ಸರ್ಕಾರ ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಅವರು ಹೊಂದಿರುವ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಮುಂದಾಗಿಗೆ ಎಷ್ಟು ಬೇಕೋ ಅಷ್ಟು ಪ್ರಮಾಣಿಕ್ಕಿಂತಲೂ ಹೆಚ್ಚಿನದಾಗಿ ರಸ ಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನಿದೆ. ಆದರೆ, ಮಳೆ ಬಿದ್ದ ತಕ್ಷಣ ರೈತರು ಗೊಬ್ಬರ-ಬೀಜಕ್ಕಾಗಿ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನೆ ಬಂಡವಾಳ ಮಾಡಿಕೊಂಡು ಕಾಳ ಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಅವರ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಎಲ್ಲಿಯೂ ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಕೊರತೆ ಉಂಟಾಗಬಾರದು. ಅಲ್ಲದೆ, ಯಾವುದೇ ರೀತಿಯಲ್ಲಿ ರೈತರಿಗೆ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೆಲವರು ಚೀನಾದಿಂದ ನಕಲಿ ಬೀಜ ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂಬುದರ ಬಗ್ಗೆ ವದಂತಿ ಇದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ನನ್ನ ಗಮನಕ್ಕೆ ಬಂದಾಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅನಾಮಧ್ಯೇಯ ಬಿತ್ತನೆ ಬೀಜ ಮಾರಾಟವಾಗದಂತೆ ಕ್ರಮ ವಹಿಸಲಾಗಿದೆ. ಅಲ್ಲದೆ, ಕಳಪೆ ಮತ್ತು ಲೂಸ್ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ದಾವಣಗೆರೆ ಜಿಲ್ಲೆಯೊಂದರಲ್ಲೇ 59 ಕಳಪೆ ಬಿತ್ತನೆ ಬೀಜ ಮಾರಾಟ ಪ್ರಕರಣ ದಾಖಲಿಸಿದ್ದು, ಹತ್ತು ಅಂಗಡಿಗಳ ಪರವಾನಿಗೆಯನ್ನು ಸಹ ರದ್ದು ಮಾಡಲಾಗಿದೆ ಎಂದು ಸಭೆಯ ಗಮನಕ್ಕೆ ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ್ದು, ಬಳ್ಳಾರಿ ಹರಪನಹಳ್ಳಿಯಿಂದ ಸಾಕಷ್ಟು ದೂರವಾಗಿದೆ. ಹೀಗಾಗಿ, ರೈತರಿಗೆ ತೊಂದರೆಯಾಗಲಿದೆ. ಆದ್ದರಿಂದ ದಾವಣಗೆರೆ ಜಿಲ್ಲೆಯಿಂದಲೇ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಬೇಕೆಂದು ಸಲಹೆ ನೀಡಿದರು.
ಈ ಹಿಂದೆ ಹಣ ಬರಲಿಲ್ಲ ಎಂಬ ಕಾರಣಕ್ಕೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಹೆಚ್ಚಾಗಿ ಬೆಳೆ ವಿಮೆ ಮಾಡಿಸುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ರೈತರನ್ನು ಬೆಳೆ ವಿಮೆ ಮಾಡಿಸುವಂತೆ ಉತ್ತೇಜಿಸಬೇಕೆಂದು ಸೂಚನೆ ನೀಡಿದರು.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವರ್ಷದಿಂದ ವರ್ಷಕ್ಕೆ ಸಬ್ಸಿಡಿ ಕಡಿಮೆ ಮಾಡುತ್ತಿರುವುದರಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಹಿಂದೆ ಇದ್ದ ಸಬ್ಸಿಡಿ ಮುಂದುವರೆಸಬೇಕೆAದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಭೈರತಿ ಬಸವರಾಜ್, ಮೊನ್ನೆ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದು ಮೈಕ್ರೋ ಇರಿಗೇಷನ್ ಹಾಗೂ ಯಾಂತ್ರೀಕರಣ ಯೋಜನೆಯಡಿ ಈ ಹಿಂದೆ ಸಾಮಾನ್ಯವರ್ಗದ ರೈತರಿಗೆ ನೀಡುತ್ತಿದ್ದ ಶೇ.50 ರಷ್ಟು ಮತ್ತು ಎಸ್ಸಿ, ಎಸ್ಟಿ ರೈತರಿಗೆ ವಿತರಿಸುತ್ತಿದ್ದ ಶೇ.90 ರಷ್ಟು ಸಬ್ಸಿಡಿಯನ್ನು ಮುಂದುವರೆಸಲು ಸಮ್ಮತಿ ನೀಡಿದ್ದು, ಶೀಘ್ರದಲ್ಲಿಯೇ ಇದು ಜಾರಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವಿಂದ್ರನಾಥ್, ಎಸ್.ವಿ.ರಾಮಚಂದ್ರ, ಪ್ರೊ.ಲಿಂಗಣ್ಣ, ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ವೆಂಕಟರಾಮ್, ಎಸಿ ಮಮತಾ ಹೊಸಗೌಡರ್, ಜೆ.ಪಾಟೀಲ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿತ್ತಾಲ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ, ನಜ್ಮಾ ಮತ್ತಿತರರು ಭಾಗವಹಿಸಿದ್ದರು.