ಹೆಚ್ಚಿದ ಕೊರೊನಾ, ಪಟಾಕಿ ನಿಷೇಧಿಸಿದ ದೆಹಲಿ ಸರ್ಕಾರ

ನವದೆಹಲಿ, ನ ೬ – ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಮಯದಲ್ಲೇ ದೆಹಲಿ ಸರ್ಕಾರ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಕುರಿತು ಇಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದು, ನವೆಂಬರ್ ೭ನೇ ತಾರೀಖು, ಅಂದರೆ ನಾಳೆಯಿಂದ ಇದೆ ೩೦ರವರೆಗೂ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ನಿನ್ನೆ ಸಿಎಂ ಅರವಿಂದ ಕೇಜ್ರಿವಾಲ್ ಸಭೆ ನಡೆಸಿದರು.

ದಸರಾ, ದುರ್ಗಾ ಪೂಜೆ ಹಬ್ಬಗಳ ಬಳಿಕ ಹಾಗೂ ವಾಯುಮಾಲಿನ್ಯ ಹೆಚ್ಚಾದ ಬಳಿಕ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಹಿನ್ನೆಲೆ ದೆಹಲಿ ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧಿಸಲು ತೀರ್ಮಾನಿಸಲಾಗಿದೆ. ಜೊತೆಗೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದೂ ಕೇಜ್ರಿವಾಲ್ ನಂತರ ಟ್ವೀಟ್ ಮಾಡಿದ್ದಾರೆ.