ಹೆಚ್ಚಾಗುತ್ತಿರುವ ದ್ವೇಷ ಭಾಷಣ: ಸಿಪಿಕೆ ಆತಂಕ

ಮೈಸೂರು: ಏ.09:- ನಮ್ಮ ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಕುವೆಂಪು ತಮ್ಮ ಕಾವ್ಯದಲ್ಲಿ ಪ್ರತಿಪಾದಿಸಿದ್ದಾರೆ. ಪ್ರಸ್ತುತ ದ್ವೇಷ ಭಾಷಣಗಳಿಂದ ಶಾಂತಿ, ಸಾಮರಸ್ಯ, ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಆತಂಕ ವ್ಯಕ್ತಪಡಿಸಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಸ್ಮಯ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ‘ಯುಗಾದಿ ಕಾವ್ಯ ಮೇಳ’ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ರಾಗದ್ವೇಷಗಳು ಹಾಸಹೊಕ್ಕಾಗಿವೆ. ಇದರಲ್ಲಿ ರಾಗವಿರಬೇಕೆ ಹೊರತು, ದ್ವೇಷವಲ್ಲ. ಹಾಗೇಯೇ ಸಮಾಜದಲ್ಲಿ ಭಾಷಣ ಸರಿ, ಆದರೆ ದ್ವೇಷ ಏಕೆ? ಎಂದು ಪ್ರಶ್ನಿಸಿದ ಸಿಪಿಕೆ, ನಾವು ಬೆಳೆಯಬೇಕಿರುವುದು ವಿಷೋದ್ಯಾನವನ್ನಲ್ಲ; ಅಮೃತೋದ್ಯಾನವನ್ನು. ಆದ್ದರಿಂದ ಕಾವ್ಯ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕು. ಅಮೃತತ್ವದೆಡೆಗೆ ಕರೆದೊಯ್ಯಬೇಕು ಎಂದು ಆಶಿಸಿದರು.
ರಾಜಕೀಯದಲ್ಲಿ ಬೇಕಾದಷ್ಟು ವ್ಯಾಜ್ಯಗಳಿವೆ. ಆದರೆ ಕಾವ್ಯಕ್ಕೆ ಇದ್ಯಾವುದೂ ಇಲ್ಲ. ಇಂತಹ ಕಾವ್ಯಕ್ಕೆ ಮುಪ್ಪಿಲ್ಲ, ಸಾವಿಲ್ಲ. ಇದು ಅನಂತವಾದದ್ದು. ದಶದಿಕ್ಕಿಗೂ ಹರಡಿದೆ. ದುರ್ಗುಣಗಳನ್ನು ನಾಶ ಮಾಡುವ ಶಕ್ತಿ ಹೊಂದಿರುವ ಕಾವ್ಯ ದ್ವೇಷವನ್ನು ಕೆರಳಿಸದೆ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ತಂದುಕೊಡಬೇಕು. ಜನರಲ್ಲಿ ಸಾಂಸ್ಕೃತಿಕ ಹಸಿವನ್ನು ಸಾಹಿತ್ಯ ಬೆಳೆಸಬೇಕು. ಇದು ಕವಿಕಾವ್ಯದ ಜವಾಬ್ದಾರಿ ಎಂದರು.
ಕಾವ್ಯ ಶ್ರೇಷ್ಠವಾದ ಕಲೆ. ಇದರ ರಚನೆಯಂತೆಯೇ ವಾಚನವೂ ಪ್ರತಿಭಾ ಪೂರ್ಣ ಕಲೆಯಾಗಿದೆ. ಇಂತಹ ಕಾವ್ಯ ವಾಚನದಿಂದ ಸಹೃದಯರು ಮಂತ್ರಮುಗ್ದರಾಗುತ್ತಾರೆ.ಕಿವಿಯಿಂದ ಕೇಳಿದ್ದನ್ನು ಮನಸ್ಸಿನಲ್ಲಿ ಅಚ್ಚೊತ್ತುವ ಶಕ್ತಿ ಕಾವ್ಯ ವಾಚನ ಕ್ರಿಯೆಗಿದೆ. ಕವಿಗಳು ಪರಿಣಾಮಕಾರಿಯಾಗಿ ಕವಿತೆ ಓದಬೇಕು. ಈ ಕೆಲಸವನ್ನು ಕುವೆಂಪು, ಬೇಂದ್ರೆ ಸಮರ್ಥವಾಗಿ ಮಾಡಿದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ವಿಸ್ಮಯ ಪ್ರಕಾಶನದ ಹಾಲತಿ ಲೋಕೇಶ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಉಪಾಧ್ಯಕ್ಷ ಕೆ.ಎಸ್. ಸತೀಶ್ ಕುಮಾರ್, ಹುಣಸೂರು ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಲೋಕೇಶ್, ಪತ್ರಿಕಾ ಕಾರ್ಯದರ್ಶಿ ಚಂದ್ರು ಮಂಡ್ಯ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ಡಿ.ಕೆ. ಉಷಾ ಉಪಸ್ಥಿತರಿದ್ದರು.
ಹಿರಿಯ ಕವಯಿತ್ರಿ ಡಾ. ಲತಾ ರಾಜಶೇಖರ್ ಅವರು ವಿವಿಧ ಕ್ಷೇತ್ರದ ಹಿರಿಯ ಸಾಧಕರಾದ ಮಂಡ್ಯದ ಲೇಖಕಿ ಎಸ್. ಗುಣಸಾಗರಿ ನಾಗರಾಜು, ತುಮಕೂರಿನ ಪ್ರಾಧ್ಯಾಪಕ ಪೆÇ್ರ.ಬಿ.ಆರ್. ರಾಮಚಂದ್ರಯ್ಯ, ವಿಸ್ಮಯ ವಿಜೇತ ಮಾಸಪತ್ರಿಕೆ ಸಂಪಾದಕ ಹಾಸನದ ಎಸ್.ಕೆ. ಶಿವಕುಮಾರ್, ಬೆಂಗಳೂರಿನ ಸಮಾಜ ಸೇವಕಿ ಕೆ.ಆರ್. ಪ್ರಭಾವತಿ ಮತ್ತು ಸಾಂಸ್ಕೃತಿಕ ಸಂಘಟಕ ಕುವರ ಯಲ್ಲಪ್ಪ, ಶಿವಾಜಿನಗರ ಪೆÇಲೀಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಎಸ್.ಡಿ. ಲಕ್ಷ್ಮೀನರಸಿಂಹ ಅವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ’ ಪ್ರದಾನ ಮಾಡಿದರು.