ದೆಹಲಿ, ಜೂ.೨೪- ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯಿಂದ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಯ ಜೊತೆಗೆ ಮಿಲಿಟರಿ ವಿಚಾರದಲ್ಲೂ ಮಹತ್ತರ ಮುನ್ನಡೆ ಸಾಧಿಸಿದಂತಾಗಿದೆ. ಅದರಲ್ಲೂ ಎಲ್ಲರ ಕುತೂಹಲ ಮೂಡಿಸಿರುವ ಜೆಟ್ ಎಂಜಿನ್-ಸಂಬಂಧಿತ ತಂತ್ರಜ್ಞಾನದ ಒಪ್ಪಂದಕ್ಕೆ ಅಂಕಿತ ಬಿದ್ದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಂಜಿನ್‌ಗಳ ಉತ್ಪಾದನೆಯಾಗಲಿದೆ ಎನ್ನಲಾಗಿದೆ. ಇದರನ್ವಯ ೮೦ ಪ್ರತಿಶತ ತಂತ್ರಜ್ಞಾನ ಹಸ್ತಾಂತರ ಕೂಡ ಭಾರತಕ್ಕೆ ಒದಗಿ ಬರಲಿದೆ.
ಜೆಟ್ ಇಂಜಿನ್ ಕಂಪೆನಿಗಳಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅಮೆರಿಕಾದ ಜನರಲ್ ಎಲೆಕ್ಟ್ರಿಕ್ (ಜಿಇ) ಹಾಗೂ ಭಾರತದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್‌ಎಎಲ್) ನಡುವೆ ಈಗಾಗಲೇ ಭಾರತೀಯ ವಾಯುಪಡೆಗೆ ಜೆಟ್ ಇಂಜಿನ್ ನಿರ್ಮಾಣ ಪೂರೈಕೆ ಕುರಿತ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. ಜಿಇಯ ಪ್ರಸಿದ್ಧ ಎಫ್೪೧೪ ಇಂಜಿನ್‌ಗಳನ್ನು ಭಾರತದಲ್ಲಿ ಉತ್ಪಾದಿಸುವ ಒಪ್ಪಂದವಾಗಿದ್ದು, ಇದು ಭಾರತೀಯ ವಾಯುಪಡೆಯ ದೇಶೀಯ ಎಲ್‌ಸಿಎ ತೇಜಸ್ ಎಮ್‌ಕೆ೨ ಯುದ್ದ ವಿಮಾನಕ್ಕೆ ಬಲಿಷ್ಠ ಇಂಜಿನ್ ಪೂರೈಕೆ ಮಾಡಲಿದೆ. ವಿಶ್ವದ ಹಲವು ದೇಶಗಳು ತಮ್ಮದೇ ಆದ ಯುದ್ದ ವಿಮಾನಗಳನ್ನು ನಿರ್ಮಿಸಿದ್ದರೂ ಜೆಟ್ ಇಂಜಿನ್ ತಯಾರಿಕೆಯಲ್ಲಿ ಕೇವಲ ಬೆರಳಣಿಕೆಯ ದೇಶಗಳಷ್ಟೇ ಮುನ್ನಡೆ ಸಾಧಿಸಿದೆ. ಅಮೆರಿಕಾ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ಮುಂತಾದ ದೇಶಗಳು ಮಾತ್ರ ಜೆಟ್ ಇಂಜಿನ್ ತಯಾರಿಕೆಯಲ್ಲಿ ವಿಶ್ವಶ್ರೇಷ್ಠತೆ ಪಡೆದುಕೊಂಡಿದೆ. ಅದರಲ್ಲೂ ಅಮೆರಿಕಾ ಎಲ್ಲಾ ದೇಶಗಳಿಗಿಂತ ಹೆಚ್ಚಿನ ಮುನ್ನಡೆ ಸಾಧಿಸಿದೆ. ಅದರಲ್ಲೂ ಅಮೆರಿಕಾ ಜಿಇ ಕಂಪೆನಿ ಇಂಜಿನ್ ತಯಾರಿಕೆಯಲ್ಲೇ ವಿಶ್ವಪ್ರಸಿದ್ಧತೆ ಪಡೆದುಕೊಂಡಿದೆ. ಇದೀಗ ಮೋದಿಯವರ ಅಮೆರಿಕಾ ಭೇಟಿಯಲ್ಲೇ ಹೆಚ್‌ಎಎಲ್ ಹಾಗೂ ಜಿಇ ನಡುವೆ ಎಫ್೪೧೪ ಇಂಜಿನ್ ತಯಾರಿಕೆ ವಿಚಾರದಲ್ಲಿ ಎಮ್‌ಒಯು ಬಿದ್ದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದನೆಯಾಗಲಿದೆ ಎನ್ನಲಾಗಿದೆ. ಸುಮಾರು ೧೧೦ ಕಿ.ಲೋ ನ್ಯೂಟನ್‌ನ ಎಂಜಿನ್ ಭಾರತದಲ್ಲೇ ತಯಾರಾಗಲಿರುವುದು ಮೋದಿಯವರ ಮಹತಾಕಾಂಕ್ಷೆಯ ಆತ್ಮನಿರ್ಭರ ಭಾರತ ಕನಸಿಗೆ ಹೆಚ್ಚಿನ ಬಲ ಬಂದಂತಾಗಿದೆ. ಇನ್ನು ಮೂಲಗಳ ಪ್ರಕಾರ ೧೦೦ ಇಂಜಿನ್‌ಗಳನ್ನು ಭಾರತದಲ್ಲಿ ಸ್ಥಾಪಿಸಲಾಗುವ ಕಂಪೆನಿಯಲ್ಲಿ ಉತ್ಪಾದನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತೀಯ ವಾಯುಪಡೆಯ ಯುದ್ದ ವಿಮಾನಗಳ ಸ್ಕ್ವಾಡ್ರನ್‌ಗಳ ಸಂಖ್ಯೆ ೩೦ ಇಳಿದಿದೆ. ಪಾಕಿಸ್ತಾನ ಹಾಗೂ ಚೀನಾ ಎರಡೂ ಕಡೆಯ ಶತ್ರುಗಳನ್ನು ಹೊಂದಿರುವ ಭಾರತದಲ್ಲಿ ಸದ್ಯ ಸ್ಕ್ವಾಡ್ರನ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಹೊಂದಿರುವ ಹಿನ್ನೆಲೆಯಲ್ಲಿ ಇದೀಗ ದೇಶದಲ್ಲೇ ಯುದ್ದ ವಿಮಾಣಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.