ಹೆಗಡೆ ನಿರ್ಲಕ್ಷ್ಯ ಸರಿಯೇ? ಇನ್ನೂ ಅನುಷ್ಠಾನವಾಗದ ಸಂತಾಪ ನಿರ್ಣಯ

ರಾಮಕೃಷ್ಣ ಹೆಗಡೆ ನಿಧನರಾಗಿ ಇಂದಿಗೆ ೧೬ ವರ್ಷಗಳು ಸಂದಿವೆ. ಹೆಗಡೆ ಸ್ಮರಣಾರ್ಥ ಈ ಲೇಖನ.

ಕರ್ನಾಟಕ ರಾಜ್ಯದಲ್ಲಿ ೧೯೪೭ ರಿಂದ ಅನೇಕರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಪ್ರಮುಖ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರಲ್ಲಿ ಬಹಳಷ್ಟು ಮಂದಿ ಸದಾ ಕಾಲ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿ ಮರಣವನ್ನಪ್ಪಿದ್ದಾರೆ. ಕೆಲವೇ ಕೆಲವು ಮಂದಿ ಇನ್ನೂ ಬದುಕಿದ್ದಾರೆ. ಆದರೆ, ಅವರನ್ನು ನೆನೆಸಿಕೊಳ್ಳುವವರೇ ಇಲ್ಲ.
ಯಾವುದೇ, ಸರ್ಕಾರದಲ್ಲಿ ಗತಿಸಿದ ವ್ಯಕ್ತಿಗಳ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವ ಕಾರ್ಯವಾಗಬೇಕಾದರೆ ಅವರ ವಂಶದ ಕುಡಿಗಳು ಸರ್ಕಾರಗಳಲ್ಲಿ ಪಾಲುದಾರರಾಗಿರಬೇಕು. ಇಲ್ಲವೆ ಪ್ರಮುಖ ಜಾತಿಯವರಾಗಿರಬೇಕು. ಒಂದು ವೇಳೆ ಅವರ ವಂಶದ ಕುಡಿಗಳು ರಾಜಕೀಯ ಕ್ಷೇತ್ರದಲ್ಲಿ ಇಲ್ಲದೆ ಹೋದರೆ ಅವರ ಸೇವೆ ಕೇಳುವವರೇ ಇಲ್ಲ ಎಂಬಂತಾಗಿದೆ.
ರಾಜ್ಯ ಸರ್ಕಾರಕ್ಕೆ ಅನೇಕರ ಹೆಸರುಗಳು ನೆನಪಿಗೆ ಬರುವುದಿಲ್ಲ. ರಾಜ್ಯ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟಿರುವವರ ಹೆಸರುಗಳಲ್ಲಿ ರಾಮಕೃಷ್ಣ ಹೆಗಡೆ ಅವರ ಹೆಸರೂ ಒಂದು. ೨೦೦೪ರ ಜನವರಿ ೧೨ ರಾಮಕೃಷ್ಣ ಹೆಗಡೆ ಅವರು ನಿಧನರಾಗಿದ್ದು, ನಿಧನರಾಗಿ ೧೬ ವರ್ಷಗಳು ಸಂದಿವೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಸದನದಲ್ಲಿ ಹೆಗಡೆ ಅವರಿಗೆ ನಡೆಸಿದ ಸಂತಾಪ ಸಭೆಯ ನಿರ್ಣಯಗಳು ಅನುಷ್ಠಾನವಾಗುವುದಿರಲಿ. ಆ ಕಡತಗಳ ನೋಡುವ ಆಸಕ್ತಿಯಾಗಲಿ, ವ್ಯವಧಾನವಾಗಲಿ, ಯಾರಿಗೂ ಇದ್ದಂತಿಲ್ಲ.
ಈ ಸರ್ಕಾರಗಳಿಗೆ ದೇವರಾಜ್ ಅರಸು, ನಿಜಲಿಂಗಪ್ಪ, ಕೆಂಗಲ್‌ಹನುಮಂತಯ್ಯ ಬಿಟ್ಟರೆ ಬೇರೆ ಯಾರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು ಎನ್ನುವ ನೆನಪೇ ಇಲ್ಲ. ಹೆಗಡೆ ಅವರಂತೆ ನೆನಪಿಗೆ ಬಾರದವರ ಹೆಸರುಗಳಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್, ಗುಂಡೂರಾಯರು, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಈ ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿ, ಪಟೇಲರು ಹಾಗೂ ಗುಂಡೂರಾಯರ ವಂಶದ ಕುಡಿಗಳು ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವುದರಿಂದ ಅವರಾದರೂ ಅವರ ತಂದೆ ಹೆಸರನ್ನು ನೆನೆಸಿಕೊಳ್ಳುವಂತಹ ಕೆಲಸ ಮಾಡುತ್ತಾರೆ. ಯಾರೂ ಇಲ್ಲದವರನ್ನು ಕೇಳುವವರಿಲ್ಲ.
೧೯೫೭ ರಿಂದ ೭೨ರ ತನಕ ಶಾಸಕರಾಗಿ, ಈ ರಾಜ್ಯದಲ್ಲಿ ಹಣಕಾಸು ಸಚಿವರಾಗಿ ೮೩ ರಿಂದ ೮೮ರ ತನಕ ಮುಖ್ಯಮಂತ್ರಿಯಾಗಿ ಕೇಂದ್ರದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ ಸಚಿವರಾಗಿ, ರಾಜ್ಯದ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ತಮ್ಮದೇ ಆದ ಲೋಕಶಕ್ತಿಯ ಪಕ್ಷದ ಅಧ್ಯಕ್ಷರಾಗಿ ಜನತಾ ಪಕ್ಷ ಮತ್ತು ಜನತಾದಳವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹೆಗಡೆ ರಾಜಕೀಯವಾಗಿಯೂ ಅನೇಕ ಹೊಡೆತಗಳನ್ನು ತಿಂದಿದ್ದರು.
ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಹೊರಹಾಕಲ್ಪಟ್ಟಿದ್ದು ಇವರಿಗೆ ಆದ ದೊಡ್ಡ ದ್ರೋಹವಾಯಿತು. ಇವರು ಬೆಳೆಸಿದ ಅನೇಕ ನಾಯಕರು ಕಷ್ಟ ಕಾಲದಲ್ಲಿ ಇವರ ಮನೆ ಕಡೆ ತಿರುಗಿಯೂ ನೋಡದಂತಹ ಮಹಾಪುರುಷರೆನಿಸಿದರು.
೧೨ ಬಾರಿ ರಾಜ್ಯದಲ್ಲಿ ಮುಂಗಡ ಪತ್ರ ಮಂಡಿಸಿದ ಕೀರ್ತಿ ಹೆಗಡೆ ಅವರಿಗೆ ಸಲ್ಲುತ್ತದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತಂದ ಇವರು ಭ್ರಷ್ಟಾಚಾರದ ನಿಗ್ರಹಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಲೋಕಾಯುಕ್ತ ವ್ಯವಸ್ಥೆ ತಂದರು.
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಯಲ್ಲಿ ಶೇ. ೨೫ ರಷ್ಟು ಮೀಸಲಾತಿ, ೧೮ ವರ್ಷದವರೆಗೆ ಮತದಾನ, ವಿಧವೆಯರಿಗೆ ಪಿಂಚಣಿ, ರೈತರ ೩೦೦ ಕೋಟಿ ರೂ.ಗಳ ಸಾಲ ಮನ್ನಾ, ಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಬಡ ಜನರನ್ನು ಗುರುತಿಸುವ ಅಂತ್ಯೋದಯ ಕಾರ್ಯಕ್ರಮ, ಒಣಭೂಮಿ ಬೇಸಾಯಕ್ಕೆ ಒತ್ತು, ಜನಸಂಪರ್ಕ ಮತ್ತು ಜನ ಸ್ಪಂದನೆಯ ಮೂಲಕ ನಿಜವಾದ ಪ್ರಜಾಪ್ರಭುತ್ವವಾದಿಯಾಗಿದ್ದ ಇವರು ಜಾತ್ಯತೀತ ನಿಲುವಿನಿಂದ ಶೋಷಿತ ವರ್ಗದ ಜನರ ಹಿತಕ್ಕಾಗಿ ಸದಾ ದುಡಿಯುವವರಾಗಿದ್ದರು.
ಇಂತಹವರು ಈ ರಾಜ್ಯದಲ್ಲಿ ಇಷ್ಟೆಲ್ಲ ಮಾಡಿದ್ದರೂ ಸಹ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆ ಅನುಷ್ಠಾನಗೊಳಿಸಿದ ಇವರ ಹೆಸರಿನಲ್ಲಿ ಒಂದು ಯೋಜನೆಯೂ ಆಗಲಿಲ್ಲ.
೧೯೭೨ ರಿಂದ ರದ್ದಾಗಿದ್ದ ಬೆಂಗಳೂರು ಮಹಾನಗರ ಪಾಲಿಕೆ ಮತ್ತೆ ೮೩ರಲ್ಲಿ ಚುನಾವಣೆ ನಡೆಸಿ ಇದಕ್ಕೆ ಜೀವ ಕೊಟ್ಟ ಇವರ ಹೆಸರು ಬಿಬಿಎಂಪಿಗೂ ನೆನಪಿಗೆ ಬಂದಿಲ್ಲ. ನಿಜಕ್ಕೂ ಇದು ವಿಷಾದನೀಯ.
ಲಕ್ಷಾಂತರ ಸಸಿಗಳನ್ನು ನೆಟ್ಟು ಅನೇಕ ಮೇಲ್ಸೇತುವೆ, ವರ್ತುಲ ರಸ್ತೆ, ಉದ್ಯಾನವನಗಳು ಇವುಗಳನ್ನು ಅಭಿವೃದ್ಧಿಪಡಿಸಿ ನಗರದ ಜನತೆಗೆ ಉತ್ತಮ ಪರಿಸರ ಒದಗಿಸಿಕೊಡುವಲ್ಲಿ ಶ್ರಮಿಸಿದ ಹೆಗಡೆಯವರು ಇಲ್ಲಿಯೂ ನಿರ್ಲಕ್ಷಿಸಲ್ಪಟ್ಟಿದ್ದಾರೆ.
ಹಸಿರು ವಲಯಗಳನ್ನು ಗುರುತಿಸಿ ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿದವರು ಪ್ರತೀ ಶನಿವಾರ ಆಕಸ್ಮಿಕ ಭೇಟಿ ನೀಡುವ ಮೂಲಕ ನಗರ ಸಂಚಾರವನ್ನು ಆರಂಭಿಸಿದವರು. ಪ್ರತಿದಿನ ಬೆಳಿಗ್ಗೆ ಸಾರ್ವಜನಿಕರ ಸಂಪರ್ಕ ಸಾಧಿಸುವ ಜನತಾ ದರ್ಶನವನ್ನು ಆರಂಭಿಸಿದವರು, ಗೂಂಡಾಗಳ ಚಟುವಟಿಕೆ ನಿಯಂತ್ರಿಸಲು ಗೂಂಡಾ ಕಾಯ್ದೆ ಜಾರಿಗೆ ತಂದವರು ಹೆಗಡೆಯವರೇನೇ. ಆದರೆ ಇಷ್ಟೆಲ್ಲ ಮಾಡಿದ ರಾಜ್ಯ ಸರ್ಕಾರಕ್ಕೆ ಬೇಡವಾಗಿರುವುದೇ ಬೇಸರದ ಸಂಗತಿ.

ರಾಮಕೃಷ್ಣ ಹೆಗಡೆಯವರು ಬೆಳೆಸಿದ ಅನೇಕ ನಾಯಕರ್‍ಯಾರೂ ಅವರನ್ನು ನೆನಪಿಸಿಕೊಳ್ಳುತ್ತಿಲ್ಲ. ಕನಿಷ್ಠ ಸರ್ಕಾರವಾದರೂ ಹೆಗಡೆಯವರ ಸೇವೆಯನ್ನು ಸ್ಮರಿಸಲು ಯಾವುದಾದರೂ ಶಾಶ್ವತ ಯೋಜನೆಯನ್ನು ಅವರ ಹೆಸರಿನಲ್ಲಿ ರೂಪಿಸಿದರೆ ಚೆನ್ನ.
ರಾಜ್ಯದ ಹಿತಕ್ಕಾಗಿ ದುಡಿದವರನ್ನು ನಿರ್ಲಕ್ಷಿಸುವುದು ಪ್ರಜಾಪ್ರಭುತ್ವದ ಲಕ್ಷಣವಾಗಲಾರದು. ಯಾವುದೇ ಸರ್ಕಾರವಿರಲಿ ಹೆಗಡೆಯವರ ಹೆಸರಿನಲ್ಲಿ ಉತ್ತಮ ಯೋಜನೆ ರೂಪಿಸಲು ಅವರಿಗೆ ಗೌರವ ತರಲಿ. ಸರಿಸುಮಾರು ೯೦ ಸಾವಿರಕ್ಕೂ ಹೆಚ್ಚು ಜಿಲ್ಲಾಪಂಚಾಯಿತಿಯ ಸದಸ್ಯರು ಆಯ್ಕೆಯಾಗಿ ಗ್ರಾಮೀಣಮಟ್ಟದಲ್ಲಿ ನಾಯಕತ್ವವನ್ನು ರೂಪಿಸಿಕೂಳ್ಳಲು ಪ್ರಜಾಪ್ರಭುತ್ವದ ಬೇರುಗಳು ಹಳ್ಳಿ. ಹಳ್ಳಿಯಲ್ಲೂ ಬಿಟ್ಟಿದ್ದು. ಎಲ್ಲೆಡೆ ರಾಜ್ಯದಲ್ಲಿ ಈ ಸದಸ್ಯರುಗಳಿಗೆ ಸನ್ಮಾನ ಮಾಡುವ ಸಂದರ್ಭದಲ್ಲಾದರೂ ರಾಜಕೀಯ ಪಕ್ಷದವರು ಈ ವ್ಯವಸ್ಥಗೆ ಕಾರಣಕರ್ತರಾದ ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್ ನಜೀರ್ ಸಾಬ್‌ರವರನ್ನು ನೆನೆದರೆ ಅದೇ ಧನ್ಯವಾಗುತ್ತದೆ.
ದಿನಾಂಕ ೧೨-೧-೨೦೦೪ ರಂದು ನಿಧನರಾದ ಹೆಗಡೆಯವರ ೧೭ ನೇ ವರ್ಷ ಪುಣ್ಯಸ್ಮರಣೆಗಾಗಿ ಈ ಲೇಖನ.
ಕೆ.ಎಸ್. ನಾಗರಾಜ್
ನಂ. ೩೭೮/೮, ೯ನೇ ಮುಖ್ಯರಸ್ತೆ,
ಪೈಪ್‌ಲೈನ್, ಹನುಮಂತನಗರ.
ಬೆಂಗಳೂರು-೫೬೦೦೫೦.