ಹೆಂಡತಿ ಮಗನನ್ನೇ ಎತ್ತುಗಳನ್ನಾಗಿ ಮಾಡಿಕೊಂಡ ರೈತ


ವಿಶೇಷ ವರದಿ
ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಡಿ.23: ಬರಗಾಲದ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಪಂಪ್ಸೆಟ್ಗಳ ಸಹಾಯದಿಂದ ಹೊಲಗಳಿಗೆ ನೀರನ್ನು ಹಾಯಿಸಿ ಬೆಳೆಯನ್ನು ಬೆಳೆಯುವಂತಹ ಪರಿಸ್ಥಿತಿ ಇದ್ದು, ಈ ಪರಿಸ್ಥಿತಿಯ ನಡುವೆ ಎತ್ತಿನ ಬೇಸಾಯ ವೆಚ್ಚ ಹೆಚ್ಚಾಗಿದ್ದು ಇದರ ಪರ್ಯಾಯವಾಗಿ ತನ್ನ ಹೆಂಡತಿ ಮಗನನ್ನೇ ಎತ್ತುಗಳನ್ನಾಗಿ ಬೇಸಾಯ ಮಾಡುತ್ತಿರುವ ದೃಶ್ಯ ಮನ ಕಲಕುವಂತಿತ್ತು!
ಹೌದು ತಾಲೂಕು ದೂಪದಹಳ್ಳಿ ಗ್ರಾಮದ ರೈತ ಜಿ. ಶೇಖರಪ್ಪ ಎಂಬುವವರು ತನ್ನ ಪತ್ನಿ ಜಿ.ಪಾರ್ವತಮ್ಮ ಮತ್ತು ಮಗ ಜಿ. ಕರಿಬಸನಗೌಡ ಇವರನ್ನೇ ಎತ್ತುಗಳನ್ನಾಗಿಸಿಕೊಂಡು ವ್ಯವಸಾಯ ಮಾಡುತ್ತಿರುವ ದೃಶ್ಯ ಎಲ್ಲಾರ ಗಮನ ಸೆಳೆಯುಂತಿತ್ತು.
ವ್ಯವಸಾಯ ಮಾಡಲು ಎತ್ತುಗಳಿಲ್ಲದ ಕಾರಣ. ಒಂದು ಎಕರೆಯಲ್ಲಿ ವಾಣಿಜ್ಯ ಬೆಳೆಯಾದ ಸೀಡ್ಸ್ ನ ತುಪ್ಪದಹೀರೆಕಾಯಿ ಬಿತ್ತಿದ್ದಾರೆ.
ಈ ಒಂದು ಎಕರೆ ಹೊಲದಲ್ಲಿ ಬೆಳೆಯ ನಡುವಿನ ಕಸ, ಕಳೆಯನ್ನು ಸ್ವಚ್ಚಮಾಡಲು ಎತ್ತಿನಕುಂಟೆಬೇಕು. ಆದರೆ ಇದಕ್ಕೆ ಒಂದು ಸಾವಿರ ರೂ. ವೆಚ್ಚವಾಗುತ್ತದೆ ಎಂದು ಬರಗಾಲವಿರುವುದರಿಂದ ಪತ್ನಿ, ಮಗನೇ ಎತ್ತುಗಳಾಗಿದ್ದಾರೆ.
ಒಂದು ಅಥವಾ ಎರಡು ಎಕರೆ ಹೊಲದಲ್ಲಿರುವ ಬೆಳೆಯ ನಡುವೆ ಕಳೆ ತೆಗೆಯಲು( ಹರಗುವುದು) ಎತ್ತಿನ ಬೇಸಾಯಕ್ಕೆ 1000 ದಿಂದ 1200 ರೂಗಳು ಕೇಳುತ್ತಾರೆ. ಅರ್ಧ ಎಕರೆ ಇದ್ದರೂ ಸಹ ಅಷ್ಟೇ ಪ್ರಮಾಣದ ಹಣವನ್ನು ಲಭಿಸಬೇಕಾಗುತ್ತದೆ ಹಾಗಾಗಿ ನಾವೇ ಎತ್ತುಗಳಾಗಿ ಒಳಗೆ ಕಳೆಯನ್ನು ಕೀಳುತ್ತಿದ್ದೇವೆ ಎಂದು ರೈತ ತಮ್ಮ ಅಳಲನ್ನು ತೋಡಿಕೊಂಡನು.
ರೈತ ತಾನು ಹೊಲಕ್ಕೆ ಲಕ್ಷಗಟ್ಟಲೆ ವೆಚ್ಚದ ಹಣವನ್ನು ವ್ಯಯಿಸಿ ಬೀಜ ಬಿತ್ತಿ ಬೆಳೆದು ತಾನು ಮಾರುಕಟ್ಟೆಗೆ ಫಸಲನ್ನು ತೆಗೆದುಕೊಂಡು ಹೋಗಿ ಹಣ ಎಣಿಸುವ ನಿರೀಕ್ಷಿಸುವ ಮೊದಲೇ ಈ ನಿರೀಕ್ಷೆ ಉಸಿಗೊಳ್ಳುತ್ತಿದೆ. ಇದಕ್ಕೆ ಕಾರಣ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದಿರುವುದು. ಹಾಗಾಗಿ ಸರ್ಕಾರವು ಎಲ್ಲಾ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರು ದೇಶದ ಬೆನ್ನೆಲುಬು ಎಂದು ಕರೆಯುವ ರೈತನ ಬೆನ್ನೆಲುಬು ಮುರಿದಿದನ್ನು ಸರಿಯಾಗಿ ಮಾಡಿದಾಗ ಮಾತ್ರ ರಾಷ್ಟ್ರೀಯ ರೈತರ ದಿನಾಚರಣೆಗೆ ಅರ್ಥ ಬರುತ್ತದೆ ಎನ್ನುವುದು ಇಲ್ಲಿನ ರೈತರ ಅಭಿಲಾಷೆಯಾಗಿದೆ.
ರೈತರ ಹೆಸರಿನಲ್ಲಿ ರಾಜಕಾರಣ ಮಾಡುವ ಬದಲು ರೈತರಿಗೆ ಬೇಕಾದ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು ಎಂಬುದು ಇಲ್ಲಿನ ರೈತರ ಕೋರಿಕೆಯಾಗಿದೆ.
ದೇಶದ ಬೆನ್ನೆಲುಬಾದ ರೈತನ ಜೀವನ ಎಷ್ಟೊಂದು ನಿಕೃಷ್ಟ ಎಂಬುದಕ್ಕೆ ಮನುಷ್ಯರೇ ಎತ್ತುಗಳಾಗಿರುವ ಈ ದೃಶ್ಯವೇ ಸಾಕ್ಷಿ.

ಕೊಟ್
ನಮಗೆ ಕಮ್ಮಿ ಭೂಮಿ ಇದೆ. ಕೃಷಿಮಾಡಲು ಎತ್ತುಗಳಿಲ್ಲ. ನಾವು ಹೀಗೆನೆ ಕೃಷಿ ಮಾಡುತ್ತೇವೆ. ಇದು ನಿನ್ನೆ ಮೊನ್ನೆಯದಲ್ಲ. ಕೆಲ ವರ್ಷ ಗಳಿಂದ ವ್ಯವಸಾಯ ಮಾಡುತ್ತಿದ್ದೆ. ಇಷ್ಟು ಮಾಡಲು ಸಾವಿರ ರೂ. ಕೊಡಬೇಕು, ಆ ಹಣವಿದ್ದರೆ ಸಂಸಾರಕ್ಕೆ ಸಹಾಯವಾಗುತ್ತದೆ.
ಜಿ.ಶೇಖರಪ್ಪ ರೈತ.
 ದೂಪದಹಳ್ಳಿ.