(ಸಂಜೆವಾಣಿ ವಾರ್ತೆ)
ಮುಧೋಳ,ಜು31: ಮನುಷ್ಯನಿಗೆ ಹೃದಯ ಬಹಳ ಮುಖ್ಯ. ಹೃದಯ ಬಡಿತದ ಬಗ್ಗೆ ಯಾವಾಗಲೂ ನಿರ್ಲಕ್ಷ ಮಾಡಬಾರದು ಎಂದು ಹೃದಯ ತಜ್ಞ ಡಾ.ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಅವರು ನಗರದ ಬಿಲ್ ಮೆಮೋರಿಯಲ್ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಮುಧೋಳ ಹಾಗೂ ಎಸ್‍ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ದಿನನಿತ್ಯ ಮಿತವಾದ ಆಹಾರ ಪದ್ಧತಿ, ವ್ಯಾಯಾಮ, ವಾಕಿಂಗ್ ಮಾಡುತ್ತ ಆರೋಗ್ಯವನ್ನು ನಿರ್ಲಕ್ಷಿಸದೇ ಮೇಲಿಂದ ಮೇಲೆ ಹೃದಯ ತಪಾಸಣೆ ಮಾಡಿಸುತ್ತಿರಬೇಕು ಎಂದು ಅವರು ಹೇಳಿದರು. ಅಲ್ಲದೇ ಇನ್ನಿತರ ರೋಗಗಳಾದ ಬಿಪಿ, ಶುಗರ್‍ನಂತಹ ರೋಗಗಳಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಈ ರೋಗಗಳಿಂದ ಪಾಶ್ರ್ವವಾಯು, ಹೃದಯಾಘಾತವಾಗುವ ಸಾಧ್ಯತೆಗಳಿರುವುದರಿಂದ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಬೇಕೆಂದು ಅವರು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಅರ್ಜುನ ಕೊಡಗ ಮಾತನಾಡಿ, ಇಂದು ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ 250 ಕ್ಕೂ ಹೆಚ್ಚು ರೋಗಿಗಳಿಗೆ ಬಿಪಿ, ಶುಗರ್, ಇಸಿಜಿ, 2ಡಿ ಇಕೋ ತಪಾಸಣೆ ಮಾಡುವ ಮೂಲಕ ಅದರಲ್ಲಿ 15 ರೋಗಿಗಳಿಗೆ ರೋಗಲಕ್ಷಣಗಳು ಕಂಡುಬಂದಿದ್ದು ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು. ಮುಧೋಳ ರೋಟರಿ ಕ್ಲಬ್ ವತಿಯಿಂದ ನನ್ನ ಅಧ್ಯಕ್ಷತೆಯವಧಿಯಲ್ಲಿ ಮುಂಬರುವ ದಿನಗಳಲ್ಲಿ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಎಮ್.ಬಿ.ಭಕ್ಷಿ ಶಿಬಿರವನ್ನು ಉದ್ಘಾಟಿಸಿದರು. ನಗರದ ಹೃದಯ ತಜ್ಞ ಡಾ.ಶ್ರೀನಿವಾಸ ನಾಯಿಕ, ಪ್ರಮುಖರಾದ ಗಿರೀಶ ಮೋದಿ, ಸ್ವಪ್ನಿಲ್ ಶಹಾ, ಸಿದ್ದು ರಾಮತೀರ್ಥ, ಪಾಟೀಲ, ಉಮೇಶ ಬಾಡಗಿ,ಮಹಾದೇವ ಇಂಗಳೆ ಮತ್ತು ಎಸ್‍ಡಿಎಮ್ ನಾರಾಯಣ ಹಾರ್ಟ್ ಸೆಂಟರಿನ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುಭಾಸ ರಾಮತೀರ್ಥ ಹಾಗೂ ವಿಠ್ಠಲ ವೋರೆ ಕಾರ್ಯಕ್ರಮ ಆಯೋಜಿಸಿದ್ದರು.
ಕಿರಣ ಟಂಕಸಾಲಿ ನಿರೂಪಿಸಿದರು. ಕಾರ್ಯದರ್ಶಿ ಮಹಾದೇವ ಯಳಶೆಟ್ಟಿ ವಂದಿಸಿದರು.