ಹೃದಯಾಘಾತ ತಡೆಗೆ, ಪುನೀತ್ ಹೆಸರಲ್ಲಿ ಯೋಜನೆ ಜಾರಿ: ದಿನೇಶ್

ಬೆಂಗಳೂರು, ಆ. ೨೦- ರಾಜ್ಯದಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹಠಾತ್ ಹೃದಯಾಘಾತಗಳಿಗೆ ತಡೆ ಹಾಕಿ ಸೂಕ್ತ ಚಿಕಿತ್ಸೆ ಒದಗಿಸಲು ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ಯೋಜನೆಯೊಂದನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಿಸಿ ಚಿಕಿತ್ಸೆ ನೀಡಲು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಅದರಂತೆ ಪುನೀತ್‌ರಾಜ್‌ಕುಮಾರ್ ಹೆಸರಿನಲ್ಲಿ ಹೃದಯಾಘಾತಕ್ಕೆ ತಡೆ ಹಾಕುವ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಗಾಂಧಿನಗರ ಕ್ಷೇತ್ರ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಠಾತ್ ಹೃದಯಾಘಾತಗಳನ್ನು ತಡೆಯಲು ಆಟೋಮೆಟೇಡ್ ಎಕ್ಸಟ್ರನಲ್ ಡಿಫಿಬ್ರಿಲೇಟರ್‌ಗಳನ್ನು ಆಸ್ಪತ್ರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಕೆ ಮಾಡಲಾಗುವುದು ಎಂದರು.
ಮೊದಲ ಹಂತದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಈ ಯೋಜನೆಗೆ ಆಯ್ಕೆ ಮಾಡಿದ್ದೇವೆ. ಜಯದೇವ ಆಸ್ಪತ್ರೆಯಡಿ ಕೆಲ ಜಿಲ್ಲೆ ಹಾಗೂ ತಾಲ್ಲೂಕುಗಳ ಆಸ್ಪತ್ರೆಗಳನ್ನು ತರಲಾಗುವುದು. ಈ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಏನಾದರೂ ಹೃದಯಾಘಾತ ಅಥವಾ ಹೃದಯ ಸಂಬಂಧಿ ತುರ್ತು ಸಮಸ್ಯೆಗಳು ರೋಗಿಗಳಿಗೆ ಕಂಡು ಬಂದರೆ ತಕ್ಷಣ ವೈದ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ರೋಗಿಯನ್ನು ಉಳಿಸಲು ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ಬಗ್ಗೆ ಸ್ಥಳೀಯ ವೈದ್ಯರಿಗೆ ಸಲಹೆ ನೀಡುತ್ತಾರೆ ಎಂದರು.
ಇದರ ಜತೆಗೆ ಆಟೋಮೆಟೇಡ್ ಎಕ್ಸಟ್ರನಲ್ ಡಿಫಿಬ್ರಿಲೇಟರ್‌ಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆ, ಸಾರ್ವಜನಿಕ ಸ್ಥಳಗಳಾದ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದರು.
ಈ ಯಂತ್ರ ಮಾರಣಾಂತಿಕ ಹೃದಯಾಘಾತದ ತೀವ್ರತೆ ಅಳೆಯುತ್ತದೆ. ಹಾಗೆಯೇ ಸ್ವಯಂ ಚಾಲಿತವಾಗಿ ತುರ್ತು ಚಿಕಿತ್ಸೆ ನೀಡುತ್ತದೆ. ಕೆಲವು ಸಂದರ್ಭದಲ್ಲಿ ಈ ಎ ಇಡಿ ಯಂತ್ರ ಎಲೆಕ್ಟ್ರಿಕ್ ಶಾಕ್ ಡಿಫಿಬ್ರಿಲೇಷನ್ ನೀಡಲು ಸಹಾಯ ಮಾಡುತ್ತದೆ. ಪ್ರಾಥಮಿಕ ಚಿಕಿತ್ಸೆ ನಂತರ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಈ ಯಂತ್ರ ಅಳವಡಿಕೆಯ ಮೂಲಕ ಹಠಾತ್ ಹೃದಯಾಘಾತ ರೋಗಿಗಳಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಹೃದಯಾಘಾತ ರೋಗಿಗಳಿಗೆ ಗೋಲ್ಡನ್ ಟೈಮ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಇದರಿಂದ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ಯಂತ್ರ ಅಳವಡಿಕೆಯ ಬಗ್ಗೆ ಇನ್ನೆರಡು ವಾರಗಳಲ್ಲಿ ಟೆಂಡರ್ ಕರೆಯಲಾಗುವುದು. ಬಜೆಟ್‌ನಲ್ಲಿ ಘೋಷಣೆಯಾದಂತೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.