ಹೃದಯಾಘಾತ ಜನರಲ್ ವೇಣುಗೋಪಾಲ್ ನಿಧನ

ಸಿಕಂದರಾಬಾದ್,ಏ.೨೯- ಪರಮ ವಿಶಿಷ್ಟ ಸೇವಾ ಪದಕ, ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನ.೧೪ ೧೯೨೭ ರಲ್ಲಿ ಜನಿಸಿದ ಅವರು, ಆಂಧ್ರ ಪ್ರದೇಶದ ತಿರುಪತಿ ನಿವಾಸಿಯಾಗಿದ್ದರು. ೧೯೫೦ರಲ್ಲಿ ಗೂರ್ಖಾ ರೈಫಲ್ಸ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ ನಂತರ ೧೯೭೧ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಲೆಫ್ಟಿನೆಂಟ್ ಕಲೋನಿಯಲ್ ಆಗಿ ಸೇವೆ ಸಲ್ಲಿಸಿದ್ದರು.
ಗೂರ್ಖಾ ರೈಫಲ್ಸ್‌ನ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಮೇಲೆ ಸಮರ್ಥವಾಗಿ ದಾಳಿ ನಡೆಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಅಂತಿಮಯಾತ್ರೆಯನ್ನು ಮೊಟಕುಗೊಳಿಸಲಾಗಿದೆ. ಕೆಲವೇ ಸಿಬ್ಬಂದಿಗಳು ಮಾತ್ರ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮೇಜರ್ ಜನರಲ್ ಮೃತದೇಹವನ್ನು ವೆಂಕಟೇಶ್ವರ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು.