ಹೃದಯಾಘಾತಕ್ಕೆ ಕಿರು ತೆರೆ ನಟ ಬಲಿ

ಬೆಂಗಳೂರು,ಆ.೧೮- ಇತ್ತೀಚೆಗಷ್ಟೇ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಬೆನ್ನಲ್ಲೇ ಮಂಡ್ಯ ಮೂಲದ ಕಿರುತೆರೆ ನಟ ಪವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರಿಗೆ ೨೫ ವರ್ಷ ವಯಸ್ಸಾಗಿತ್ತು. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. ಆಗಸ್ಟ್ ೧೬ ರಂದು ತೀವ್ರ ಹೃದಯಾಘಾತ ಉಂಟಾಗಿ ಪವನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಮೂಲದವರಾದ ಪವನ್ ಮಹಾರಾಷ್ಟ್ರದಲ್ಲಿ ನೆಲೆಯೂರಿದ್ದರು. ಹಿಂದಿ, ತಮಿಳು ಕಿರುತೆರೆಯಲ್ಲಿ ಪವನ್ ನಟಿಸುತ್ತಿದ್ದರು. ಬೆಳ್ಳಿ ಪರದೆಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು.

ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ನಿಧನ ಹೊಂದಿದ್ದು ಅರಳುವ ಮುನ್ನವೇ ಅವರ ಕನಸು ಬಾಡಿ ಹೋಗಿದೆ.

ಇಂದು ಅಂತ್ಯಕ್ರಿಯೆ:

ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪವನ್ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಯಾವ ಧಾರಾವಾಹಿಯಲ್ಲಿ ನಟಿಸಿದ್ದರು ಎನ್ನುವುದು ಮಾಹಿತಿ ಲಭ್ಯವಾಗಬೇಕಾಗಿದೆ.