ಹೂ ಬಯಲ ಮಾಮರ’ ಕೃತಿ ಬಿಡುಗಡೆ ಶೇಷಗಿರಿ ರಾವ್ ಚಿಂತನೆಗಳು ಸ್ಪೂರ್ತಿ

‘ಸಂಜೆವಾಣಿ ವಾರ್ತೆ
ಹೂವಿನಹಡಗಲಿ ಸೆ 20 : ಪ್ರಖರ ಎಡಪಂಥೀಯ ಚಿಂತನೆಗಳನ್ನು ಬೆಳೆಸಿಕೊಂಡಿದ್ದ ಸಾಹಿತಿ ಹೆಚ್.ಶೇಷಗಿರಿ ರಾವ್ ಅವರು ಜನಪರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದರು ಎಂದು ಹೊಸಪೇಟೆಯ ಚಳವಳಿಕಾರ ಜಂಬಯ್ಯ ನಾಯಕ ನೆನೆದರು.
ಇಲ್ಲಿನ ತಾ.ಪಂ. ಮಲ್ಲಿಗೆ ಸಭಾಂಗಣದಲ್ಲಿ ಸಮಭಾವ ಪ್ರಕಾಶನ ಆಯೋಜಿಸಿದ್ದ ಶೇಷಗಿರಿರಾವ್ ಹವಾಲ್ದಾರ್ ಬದುಕು ಬರಹ ಕುರಿತಾದ ‘ಹೂ ಬಯಲ ಮಾಮರ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪರ ಚಳವಳಿ ರೂಪುಗೊಳ್ಳುವ ಅವಶ್ಯಕತೆ ಇದೆ. ಸಾಮಾಜಿಕ ಹೋರಾಟ, ಚಳವಳಿ ಸಂಘಟಿಸುವಾಗ ಶೇಷಗಿರಿರಾವ್ ನೆನಪಾಗಿ ಕಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇಂದಿಗೂ ಗಟ್ಟಿತನದ ಎಡಪಂಥೀಯ ಚಿಂತನೆಗಳು ಜೀವಂತಿಕೆಯಾಗಿ ಉಳಿದಿವೆ ಎಂದರೆ ಅದಕ್ಕೆ ಎಸ್.ಎಸ್.ಹಿರೇಮಠ ಮತ್ತು ಶೇಷಗಿರಿರಾವ್ ಕಾರಣ ಎಂದು ಹೇಳಿದರು.
ಸಮಾಜಮುಖಿಯಾಗಿ ಬದುಕಿದ ವ್ಯಕ್ತಿತ್ವವನ್ನು ಪುಸ್ತಕದಲ್ಲಿ ಅನಾವರಣಗೊಳಿಸುತ್ತಿರುವ ಕುಟುಂಬವರ್ಗದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕೃತಿ ಪರಿಚಯಿಸಿದ ಕುಷ್ಟಗಿಯ ಪ್ರಮೋದ ತುರ್ವಿಹಾಳ್ ಮಾತನಾಡಿ, ಶೇಷಗಿರಿರಾವ್ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನೋವಿಗೆ ಮಿಡಿಯುವವರಾಗಿದ್ದರು. ಅವರ ಕುರಿತಾಗಿ ಹೊರ ತಂದಿರುವ  ‘ಹೂ ಬಯಲ ಮಾಮರ’ ಕೃತಿಯು ಸಾಮಾಜಿಕ ತಲ್ಲಣ ಅನುಭವಿಸಿದವರಿಗೆ ತಂಪು ನೆರಳು ನೀಡುವ ಮಾಮರವಾಗಿದೆ ಎಂದು ಹೇಳಿದರು.
ಸಾಹಿತಿ ಬಿ.ಪೀರ್ ಬಾಷಾ ಪ್ರಸ್ತಾವಿಕವಾಗಿ ಮಾತನಾಡಿ, ಮಲ್ಲಿಗೆ ನಾಡಿನ ಸಾಂಸ್ಕೃತಿಕ ಪರಂಪರೆ ಬೆಳೆಸುವಲ್ಲಿ ಶೇಷಗಿರಿರಾವ್ ಅನನ್ಯ ಕೊಡುಗೆ ನೀಡಿದ್ದಾರೆ. ಕುಟುಂಬವರ್ಗದವರು ರಾವ್ ಅವರ ಬದುಕನ್ನು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ ಎಂದು ಹೇಳಿದರು.
ದಾವಣಗೆರೆಯ ಬಿ.ಶ್ರೀನಿವಾಸ್ ಕೃತಿ ಪರಿಚಯಿಸಿದರು. ನಿವೃತ್ತ ಹಿಂದಿ ಪಂಡಿತ ವಿರುಪಾಕ್ಷಪ್ಪ ತಿಳುವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಲಾವತಿ ಶೇಷಗಿರಿರಾವ್ ಹವಾಲ್ದಾರ್, ಕೃತಿ ಸಂಪಾದಕಿ ಮಮತಾ ಹವಾಲ್ದಾರ್, ಮಲ್ಲಿಗೆ ಪ್ರಕಾಶನದ ಎಲ್.ಖಾದರ್ ಬಾಷಾ ಉಪಸ್ಥಿತರಿದ್ದರು.
ಗಣೇಶರಾವ್ ಹವಾಲ್ದಾರ್ ಸ್ವಾಗತಿಸಿದರು. ಸುರೇಶ ಅಂಗಡಿ ನಿರೂಪಿಸಿದರು. ರಾಮಪ್ಪ ಕೋಟಿಹಾಳ ವಂದಿಸಿದರು.
ಪ್ರಕಾಶ ಜೈನ್, ಎ.ಚಂದ್ರಪ್ಪ, ಜಯಶ್ರೀ ಅಳವುಂಡಿ, ಕು.ನಯನ ಅಳವುಂಡಿ, ವೈ.ರವಿ ಇತರರು ಸುಗಮ ಸಂಗೀತ ನಡೆಸಿಕೊಟ್ಟರು.