
ತುಮಕೂರು, ಏ. 28- ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಜೆಸಿಬಿ ಯಂತ್ರದ ಮೂಲಕ ಹೂವಿನ ಸುರಿಮಳೆಗೈದಾಗ ಅದರಲ್ಲಿದ್ದ ಕಲ್ಲು ಪರಮೇಶ್ವರ್‌ರವರ ತಲೆಗೆ ಬಿದ್ದು ರಕ್ತಸ್ರಾವವಾಗಿ ಪೆಟ್ಟಾಗಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಭೈರೇನಹಳ್ಳಿಯಲ್ಲಿ ಪರಮೇಶ್ವರ್ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಆ ವೇಳೆ ಜೆಸಿಬಿ ಯಂತ್ರದ ಮೂಲಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪುಷ್ಪವೃಷ್ಠಿ ಮಾಡುವಾಗ ಅವರ ತಲೆಗೆ ಕಲ್ಲು ಬಿದ್ದು ಪೆಟ್ಟಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರು ಅಕ್ಕಿರಾಂಪುರದ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ತುಮಕೂರಿಗೆ ತೆರಳಿದರು,
ಯಾರೋ ಕಿಡಿಗೇಡಿಗಳು ಹೂವಿನ ರಾಶಿಯಲ್ಲಿ ಕಲ್ಲು ಬೆರೆಸಿರಬಹುದು ಎಂದು ಪರಮೇಶ್ವರ್ ಅಭಿಮಾನಿಗಳು ಶಂಕಿಸಿದ್ದು, 2ನೇ ಬಾರಿಗೆ ಕಲ್ಲಿನಿಂದ ಪೆಟ್ಟು ನೀಡಲು ಸಂಚು ರೂಪಿಸಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಸುವ ದಿನದಂದು ಸಹ ಕಿಡಿಗೇಡಿಗಳು ಕಲ್ಲು ಎಸೆದಿದ್ದರಿಂದ ಆ ಕಲ್ಲು ಕರ್ತವ್ಯನಿರತ ಪೊಲೀಸರಿಗೆ ಬಿದ್ದು ಗಾಯಗೊಂಡಿದ್ದರು.
ತದ ನಂತರ ಇಂದು ಪ್ರಚಾರದ ವೇಳೆ ಹೂವಿನಲ್ಲಿ ಕಲ್ಲನ್ನು ಬೆರೆಸಿ ಹೂವಿನ ಸುರಿಮಳೆಗೈಯ್ಯುವಾಗ ಹೂವಿನೊಂದಿಗೆ ಕಲ್ಲು ಅವರ ತೆಲೆಯ ನೆತ್ತಿ ಭಾಗಕ್ಕೆ ಬಿದ್ದು ರಕ್ತಸ್ರಾವವಾಗಿದೆ. ಆ ಸಂದರ್ಭದಲ್ಲಿ ಇದು ಗೊತ್ತಾಗದೆ ಅಭಿಮಾನಿಗಳು ಎತ್ತಿ ಪರಮೇಶ್ವರ್‌ರವರನ್ನು ಎತ್ತಿ ಕುಣಿಸುತ್ತಿದ್ದರು. ಅವರು ತಲೆಮೇಲೆ ಕೈಯನ್ನಿಟ್ಟು ನನ್ನನ್ನು ಇಳಿಸಿರಿ ನೋವಾಗುತ್ತಿದೆ ಎಂದು ಜೋರಾಗಿ ಹೇಳಿದ್ದಾರೆ. ತಕ್ಷಣ ಅವರನ್ನು ಕೆಳಗೆ ಇಳಿಸಿ ನೋಡಿದಾಗ ತಲೆಯಲ್ಲಿ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ.
ತಕ್ಷಣ ಕಾರಿನಲ್ಲಿ ಪರಮೇಶ್ವರ್ ಅವರನ್ನು ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ತುಮಕೂರಿಗೆ ಕರೆದೊಯ್ದಿದ್ದಾರೆ.
ಈ ಸಂದರ್ಭದಲ್ಲಿ ಡಾ. ತಮೀಮ್ ಜತೆಗಿದ್ದರು.