ಹೂವಿನಹಡಗಲಿ : 78.92 ಶಾಂತಿಯುತ ಮತದಾನ

ಹೂವಿನಹಡಗಲಿ ಡಿ 25 : ತಾಲೂಕಿನ 26 ಗ್ರಾಮ ಪಂಚಾಯಿತಿಗಳ 430 ಸದಸ್ಯ ಸ್ಥಾನಗಳ ಪೈಕಿ 410 ಸ್ಥಾನಗಳಿಗೆ ಭಾನುವಾರ ಶೇ 78.92 ರಷ್ಟು ಶಾಂತಿಯುತ ಮತದಾನ ನಡೆದಿದೆ ಎಂದು ತಹಶೀಲ್ದಾರ್ ವಿಶ್ವಜಿತ್ ಮೆಹತಾ ತಿಳಿಸಿದರು.
ಚಳಿಯ ಕಾರಣಕ್ಕೆ ಬೆಳಿಗ್ಗೆ ನೀರಸದಿಂದ ಆರಂಭವಾದ ಮತದಾನ ಮಧ್ಯಾಹ್ನ ಹಾಗೂ ಸಂಜೆ ಬಿರುಸಿನಿಂದ ಸಾಗಿತು. ಹಿರಿಯ ಜೀವಿಗಳು ಹಾಗೂ ಅಂಗವಿಕಲರನ್ನು ಕರೆತರುಲು ಎಲ್ಲ ಮತಗಟ್ಟೆಗಳಲ್ಲಿ ವೀಲ್ ಚೇರ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ವಿಕಲಾಂಗಚೇತನರು ನಿರಾಳವಾಗಿ ಬಂದು ಮತದಾನ ಮಡಿದರು.
ತಾಲೂಕಿನ ಲಂಬಾಣಿ ತಾಂಡಾಗಳಿಂದ ಬೇರೆಡೆ ವಲಸೆ ಹೋಗಿದ್ದ ಕಾರ್ಮಿಕರನ್ನು ಅಭ್ಯರ್ಥಿಗಳು ಮತದಾನಕ್ಕೆ ಕರೆತಂದರು. ತಾಲೂಕಿನ ಹಿರೇಕೊಳಚಿಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಮತಗಟ್ಟೆ ಸಮೀಪವೇ ಮತದಾರರಿಗೆ ಆಮಿಷವೊದ್ದುವ ವಿಚಾರವಾಗಿ ಹೊಳಗುಂದಿ ಇತರೆ ಕಡೆಗಳಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು.