ಹೂವಿನಹಡಗಲಿ : ಶ್ರದಾಭಕ್ತಿಯಿಂದ ಉರುಸ್ ಆಚರಣೆ

ಹೂವಿನಹಡಗಲಿ ಏ 03 : ಪಟ್ಟಣದ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರಗಾದಲ್ಲಿ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಉರುಸು ಆಚರಣೆ ಜರುಗಿತು.
ಕೋವಿಡ್ ಸೋಂಕಿನ ಭೀತಿ ಇರುವುದರಿಂದ ತಾಲೂಕು ಆಡಳಿತ ಉರುಸು ಆಚರಣೆಯನ್ನು ನಿರ್ಬಂಧಿಸಿ, ಸರಳ ಆಚರಣೆಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಹಾಗಾಗಿ ಉರುಸ್ ಕಮಿಟಿಯವರು ಗಂಧ ಮಹೋತ್ಸವ ಮೆರವಣಿಗೆಯನ್ನು ರದ್ದುಪಡಿಸಿ, ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ನಡೆಸಿದರು.
ಬೆಳಗಿನ ಜಾವ ದರ್ಗಾದಲ್ಲಿ ವಂಶ ಪಾರಂಪರ್ಯ ಮುಜಾವರರು ಗಂಧ ಮಹೋತ್ಸವ ಪ್ರಯುಕ್ತ ನೀರಿನಲ್ಲಿ ದೀಪ ಉರಿಸಿದರು. ಇದನ್ನು ನೋಡಲು ಅಪಾರ ಜನರು ಸೇರಿದ್ದರು. ನಂತರ ಉರುಸ್ ಆಚರಣೆ ಆರಂಭವಾಯಿತು. ಹಿಂದೂ ಮುಸ್ಲಿಂ ಬಾಂಧವರು ಏಕ ಕಾಲದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿದ್ದರಿಂದ ದರ್ಗಾದಲ್ಲಿ ಭಾವೈಕ್ಯ ಸಂಗಮವಾಗಿತ್ತು.
ಭಕ್ತರು ಬೆಳಿಗ್ಗೆಯಿಂದಲೇ ವಿವಿಧ ರೀತಿಯ ಹರಕೆಗಳನ್ನು ತೀರಿಸಿದರು. ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಭಕ್ತರು ಉರುಸಿನಲ್ಲಿ ಭಾಗವಹಿಸಿದ್ದರು. ನಿರ್ಬಂಧದ ಹಿನ್ನೆಲೆಯಲ್ಲಿ ಉರುಸ್ ಆಚರಣೆ ತೀರಾ ನೀರಸವಾಗಿತ್ತು. ಭಕ್ತರ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಇತ್ತು.