ಹೂವಿನಹಡಗಲಿ : ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರಿಷತ್ ನಲ್ಲಿ ಗ್ರಾಮೀಣ ಜನರ ಧ್ವನಿಯಾಗುವೆ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ನನಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಲ್ಲಿ ವಿಧಾನ ಪರಿಷತ್ ನಲ್ಲಿ ಗ್ರಾಮೀಣ ಜನರ ಧ್ವನಿಯಾಗಿ ಕೆಲಸ ಮಾಡುವೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಹೇಳಿದರು.
ಪಟ್ಟಣದ ದಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮತಯಾಚಿಸಿದರು.
ಬೇರು ಮಟ್ಟದಲ್ಲಿ ನಾಯಕತ್ವ ಬೆಳೆಯಲಿ ಎಂಬ ಸದಾಶಯದಿಂದ ಲೋಕಸಭೆಯಲ್ಲಿ ಧ್ವನಿಯೆತ್ತಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸಿದ್ದೇನೆ. ಕಾಯ್ದೆ, ಕಾನೂನುಗಳ ಪರಿಚಯ ಇರದ ಪಂಚಾಯಿತಿ ಸದಸ್ಯರ ಮೇಲೆ ಅಧಿಕಾರಿಗಳು ಸವಾರಿ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಪಂಚಾಯಿತಿ ಅಧ್ಯಕ್ಷರಿಗೆ ಕಾರ್ಯಾಂಗದ ಅಧಿಕಾರ ಕೊಡಿಸಲು ಹೋರಾಟ ಮಾಡುವೆ. ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಬಸ್ ಪಾಸ್ ಸೌಲಭ್ಯ ನೀಡುವಂತೆ ಸರ್ಕಾರದ ಗಮನ ಸೆಳೆಯುವೆ ಎಂದು ತಿಳಿಸಿದರು.
ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಸಚಿವ ಆನಂದಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷ ಟೀಕಿಸುವ ನೈತಿಕತೆ ಇಲ್ಲ. ಕಾಂಗ್ರೆಸ್ ನಿಂದ ಗೆದ್ದು ಬಿಜೆಪಿ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿ ವಿಜಯನಗರ ಜಿಲ್ಲೆ ಬೇಡಿಕೆ ಈಡೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಟೀಕಿಸುವ ಮುನ್ನ ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ, ಆಸ್ತಿಪಾಸ್ತಿಗಳಿಗೆ ಅವರು ಬಿಜೆಪಿ ಸರ್ಕಾರದಿಂದ ಪರಿಹಾರ ಕೊಡಿಸಲಿ ಸವಾಲು ಹಾಕಿದರು.
ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಮಂತ್ರಿಯಾಗುವ ಆಸೆಯಿಂದ ಪಕ್ಷಾಂತರ ಮಾಡಿರುವ ಆನಂದಸಿಂಗ್ ಅವರಿಗೆ ಕಾಂಗ್ರೆಸ್ ಕುರಿತು ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಟೀಕಿಸುವ ಮುನ್ನ ಅವರು ಜಿಲ್ಲೆಗೆ ನೀಡಿದ ಕೊಡುಗೆಯನ್ನು ಜನತೆಗೆ ತಿಳಿಸಲಿ ಎಂದರು.
ಶಾಸಕರಾದ ಭೀಮಾನಾಯ್ಕ,  ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪಕ್ಷಪಾತ ಮಾಡದೇ ಸ್ಥಳೀಯ ಸಂಸ್ಥೆಗಳ ಎಲ್ಲ ಪ್ರತಿನಿಧಿಗಳ ಕೆಲಸ ಮಾಡಿಕೊಟ್ಟಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಅವರ ಬೆಂಬಲಕ್ಕೆ ನಿಂತಿದ್ದು, ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಅಟವಾಳಗಿ ಕೊಟ್ರೇಶ, ಬಸವನಗೌಡ ಪಾಟೀಲ್, ಬಿ.ಹನುಮಂತಪ್ಪ, ಚಾಂದಸಾಹೇಬ್, ಜಿ.ವಸಂತ ಇದ್ದರು.

Attachments area