ಹೂವಿನಹಡಗಲಿ : ವಿಜೃಂಭಣೆಯ ರಾಜಾಬಾಗ್ ಸವಾರ್ ಉರುಸು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.12: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ಉರುಸು ಇಂದು ವಿಜೃಂಭಣೆಯಿಂದ ಜರುಗಿತು.
ಸಂತರ ಗೌರವಾರ್ಥವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ನೀರಿನಲ್ಲಿ ದೀಪ ಉರಿಸುವ ಮೂಲಕ ಬೆಳಗಿನ ಜಾವ ಉರುಸು ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನ ಜಾವ ದರಗಾ ಕಟ್ಟೆಯಲ್ಲಿ ವಂಶ ಪಾರಂಪರ್ಯ ಮುಜಾವರರು ಸಾಂಪ್ರದಾಯಿಕವಾಗಿ ನೀರಿನಲ್ಲಿ ದೀಪ ಉರಿಸಿದರು. ಪವಾಡ ರೀತಿಯಲ್ಲಿ ನಡೆದ ಗಂಧ ಮಹೋತ್ಸವ ವೀಕ್ಷಿಸಲು ಸಾವಿರಾರು ಭಕ್ತರು ಸೇರಿದ್ದರು.
ಬೆಳಿಗ್ಗೆಯಿಂದಲೇ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಸಕ್ಕರೆ ಓದಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಎಲ್ಲ ಧರ್ಮದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.
ತಮ್ಮ ಮಕ್ಕಳ ತೂಕದ ಸಕ್ಕರೆಯನ್ನು ದರಗಾಕ್ಕೆ ಅರ್ಪಿಸುವುದು, ದೀಡು ನಮಸ್ಕಾರ ಹಾಕುವುದು, ದರಗಾ ಮುಂದಿನ ದುನಿಯಲ್ಲಿ ಉಪ್ಪು ಕೊಬ್ಬರಿಯನ್ನು ಉರಿಸುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತೀರಿಸಿದರು.
ಭಾವೈಕ್ಯತೆ ಗಟ್ಟಿಗೊಳ್ಳಲಿ: ಹೂವಿನಹಡಗಲಿಯಲ್ಲಿ ಎಲ್ಲ ಜಾತಿ, ಧರ್ಮಿಯರು ಸೇರಿ ಉರುಸು ಆಚರಿಸುವ ಸಂಪ್ರದಾಯ ಒಳ್ಳೆಯ ಬೆಳವಣಿಗೆಯಾಗಿದೆ. ಧಾರ್ಮಿಕ ಸಾಮರಸ್ಯ ಇದೇ ರೀತಿ ಮುಂದುವರಿಯಬೇಕು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಗಂಧ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲೂ ಇಡೀ ದೇಶ ಸ್ತಬ್ದವಾಗಿದ್ದರೂ ಇಲ್ಲಿನ ಉರುಸು ಆಚರಣೆ ಅಡ್ಡಿ ಆತಂಕವಿಲ್ಲದೇ ನಡೆದಿರುವುದು ಯಮನೂರುಸ್ವಾಮಿಯ ದೈವಲೀಲೆ ಕಾರಣ ಎಂದರು.
ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಹೂವಿನಹಡಗಲಿಯಲ್ಲಿ ಶಾಂತಿ, ಸೌಹಾರ್ದತೆ ಬಯಸುವ ಜನ ಇರುವುದರಿಂದ ಇಂತಹ ಆಚರಣೆಗಳು ನಡೆಯುತ್ತಿವೆ. ಈ ಸೌಹಾರ್ದತೆಯನ್ನು ಎಲ್ಲರೂ ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು. ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ರಾಮಸ್ವಾಮಿ ರಾಕೇಶಯ್ಯ, ಬೆಳಗಟ್ಟಿಯ ಮುಸ್ತಾಫಾ ಖಾದ್ರಿ ಸಾನಿಧ್ಯ ವಹಿಸಿ ಮಾತನಾಡಿದರು. ಹಿರಿಯ ವಕೀಲ ಎಸ್.ಹೆಚ್.ಛಬ್ಬಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ಎಸ್.ತಿಮ್ಮಣ್ಣ, ವೀರಶೈವ ಮಹಾಸಭಾ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಉರುಸು ಕಮಿಟಿ ಅಧ್ಯಕ್ಷ ಅರುಣಿ ಮಹ್ಮದ್ ರಫಿ, ಕೆ.ಗೌಸ್ ಮೊಹಿದ್ದೀನ್, ಬಿ.ಖಾಜಾಹುಸೇನ್, ಶೇಕ್ ಮಹ್ಮದ್, ಹುಗಲೂರು ನಜೀರ್ ಸಾಹೇಬ್ ಇತರರು ಇದ್ದರು.