ಹೂವಿನಹಡಗಲಿ ಜಿಬಿಆರ್ ಕಾಲೇಜಿಗೆ ಮೊದಲ ಱ್ಯಾಂಕ್


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.08 : 2023ನೇ ಶೈಕ್ಷಣಿಕ ಸಾಲಿನ ಪದವಿ ಪರೀಕ್ಷೆಯಲ್ಲಿ ಪಟ್ಟಣದ ಜಿಬಿಆರ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ಸೇರಿದಂತೆ ಐದು ಗ್ರಾಮೀಣ ವಿದ್ಯಾರ್ಥಿಗಳು ಱ್ಯಾಂಕ್ ಗಳಿಸಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಬುಧವಾರ ಱ್ಯಾಂಕ್ ಪಡೆದವರ ಪಟ್ಟಿ ಪ್ರಕಟಿಸಿದೆ.
ಜಿಬಿಆರ್ ಕಾಲೇಜಿನ ದೀಪಾಶ್ರೀ ಕಲಾ ವಿಭಾಗದಲ್ಲಿ 4100 ಅಂಕಗಳಿಗೆ 3830 (ಶೇ 93.41) ಅಂಕ ಗಳಿಸಿ ಮೊದಲ ರ್ಯಾಂಕ್  ಪಡೆದಿದ್ದಾರೆ. ಇದೇ ಕಾಲೇಜಿನ ಗುರುಬಸವರಾಜ ನೇಕಾರ ಹಾವನೂರು ಅವರು 3745 (ಶೇ 91.34) ಎರಡನೇ ಱ್ಯಾಂಕ್ ಪಡೆದಿದ್ದಾರೆ. ಜಿಬಿಆರ್ ಕಾಲೇಜು ಸತತ ಮೂರು ವರ್ಷಗಳಿಂದ ಱ್ಯಾಂಕ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಪಟ್ಟಣದ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಡ್ಲಿ ವೀಣಾ ಕಲಾ ವಿಭಾಗದಲ್ಲಿ 3669 (ಶೇ 89.49), ಗೀತಾ ದೊಗ್ಗಳ್ಳಿ 3661 (ಶೇ 89.29) ಅಂಕ ಗಳಿಸಿ ಕ್ರಮವಾಗಿ 8, 9ನೇ ಱ್ಯಾಂಕ್ ಪಡೆದಿದ್ದಾರೆ. ಹರ್ಷ ಮಲ್ಕಿಒಡೆಯರ್ ವಿಜ್ಞಾನ ವಿಭಾಗದಲ್ಲಿ 5300 ಅಂಕಗಳಿಗೆ 4832 (ಶೇ 91.17) ಅಂಕ ಗಳಿಸಿ 10ನೇ ಱ್ಯಾಂಕ್ ಪಡೆದಿದ್ದಾರೆ.
‘ಪ್ರಾಧ್ಯಾಪಕರ ಮಾರ್ಗದರ್ಶನ, ಪೋಷಕರ ಸಹಕಾರದಿಂದ ನಮ್ಮ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮೊದಲೆರಡು ಱ್ಯಾಂಕ್ ಗಳಿಸಿದ್ದಾರೆ. ವೀ.ವಿ. ಸಂಘ, ಕಾಲೇಜು ಆಡಳಿತ ಮಂಡಳಿಯ ಇಚ್ಛಾಸಕ್ತಿಯಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಪರಿಸರ ರೂಪುಗೊಂಡಿದೆ. ಸತತ ಮೂರು ವರ್ಷಗಳಿಂದ ಮೊದಲ ರ್ಯಾಂಕ್ ಗಳಿಸಿರುವುದಕ್ಕೆ ನಮ್ಮೆಲ್ಲ ಬೋಧಕ ಸಿಬ್ಬಂದಿಯ ಸಂತೋಷ ಇಮ್ಮಡಿಗೊಂಡಿದೆ’ ಎಂದು ಜಿಬಿಆರ್ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಸಂತಸ ಹಂಚಿಕೊಂಡರು.