ಹೂವಿನಹಡಗಲಿ ಜಿಪಿಜಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮಜೀವನ ಮೌಲ್ಯ ಕಲಿಸಿದ ಗುರುಗಳಿಗೆ ಋಣಿಯಾಗಿರಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ:ಜೂ,28- ವಿದ್ಯಾರ್ಥಿ ದೆಸೆಯಲ್ಲಿ ಜೀವನಮೌಲ್ಯ ಕಲಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾದ ಗುರುಗಳಿಗೆ ಪ್ರತಿಯೊಬ್ಬರೂ ಋಣಿಯಾಗಿರಬೇಕು ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜು ಸಭಾಂಗಣದಲ್ಲಿ ವಿಜಯನಗರ ಮಲ್ಲಿಗೆ ಸ್ನೇಹ ಬಳಗ 1990-91ನೇ ಸಾಲಿನ ಜಿಪಿ ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಶಕಗಳ ಹಿಂದಿನ ಶಿಕ್ಷಣ ಪದ್ದತಿ ಕಲಿಕೆಗೆ ಪರಿಣಾಮಕಾರಿಯಾಗಿತ್ತು. ಆಗಿನ ಶಿಕ್ಷಕರು ಬರೀ ಪಠ್ಯಕ್ಕೆ ಸೀಮಿತವಾಗಿರದೇ ಜೀವನ ಶಿಕ್ಷಣ ಕಲಿಕೆಗೆ ಆದ್ಯತೆ ನೀಡುತ್ತಿದ್ದರು. ಪಠ್ಯದ ಜತೆಗೆ ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಮೌಲ್ಯ, ಶ್ರಮ ಸಂಸ್ಕೃತಿಯ ಪಾಠ ಬೋಧಿಸುತ್ತಿದ್ದರು. ಇಂತಹ ಗುರುಗಳ ಬಳಿ ವಿದ್ಯೆ ಕಲಿತ ಬಹುತೇಕರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ’ ಎಂದು ಹೇಳಿದರು.
‘ಜಿಬಿಆರ್ ಕಾಲೇಜು ಮತ್ತು ಜಿಪಿಜಿ ಪ್ರೌಢಶಾಲೆಗಳು ಬರೀ ಶಿಕ್ಷಣ ಸಂಸ್ಥೆಗಳಲ್ಲ, ಮಲ್ಲಿಗೆ ನಗರಿಯ ಅಸ್ಮಿತೆಗಳು. ಇಲ್ಲಿ ವಿದ್ಯೆ ಕಲಿತ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ತಾಲ್ಲೂಕಿನ ಆದರ್ಶ ಶಿಕ್ಷಕರ ವೃತ್ತಿ ಬದಕನ್ನು ದಾಖಲಿಸಿ ಮುಂದಿನ ಪೀಳಿಗೆಗೂ ಪರಿಚಯಿಸುವ ನಿಟ್ಟಿನಲ್ಲಿ ವಸಂತ ಪ್ರಕಾಶನದಿಂದ ಪುಸ್ತಕ ಪ್ರಕಟಿಸುವ ಆಲೋಚನೆ ಹೊಂದಿದ್ದೇವೆ’ ಎಂದು ತಿಳಿಸಿದರು.
ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಎಚ್.ಎಂ.ಬೆಟ್ಟಯ್ಯ, ಎಂ.ಈಶಪ್ಪ, ಎಂ.ಟಿ.ವೇದಮೂರ್ತಿ, ಶಾಂತಮ್ಮ, ಡಿ.ಸಿ.ಜೋಷಿ, ಡಿ.ವಿಶ್ವನಾಥ ಆಚಾರ್ಯ, ನಾಗೇಂದ್ರನಾಯ್ಕ ಅವರಿಗೆ ಹಳೇ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ವಿಜಯನಗರ ಮಲ್ಲಿಗೆ ಸ್ನೇಹ ಬಳಗದ ಅಧ್ಯಕ್ಷ ಸೋಗಿ ಹಾಲೇಶ ಅಧ್ಯಕ್ಷತೆ ವಹಿಸಿದ್ದರು.
ಹಳೇ ವಿದ್ಯಾರ್ಥಿಗಳಾದ ಎಚ್.ಕೆ.ಮಹೇಶ, ವೆಂಕಟೇಶನಾಯ್ಕ, ಸೊಪ್ಪಿನ ವೀರಣ್ಣ, ರಾಜು ಬಾವಿಹಳ್ಳಿ, ಈಟಿ ಲಕ್ಷ್ಮಣ, ಸಿ.ಜೆ.ರಾಜೇಂದ್ರ, ಶ್ರೀಪಾದ ಭಟ್ ಹಳೇ ನೆನಪುಗಳನ್ನು ಹಂಚಿಕೊಂಡರು