ಹೂವಿನಹಡಗಲಿ : ಗ್ರಾಮದೇವತೆಗೆ ವಿಶೇಷ ಅಲಂಕಾರ

ಹೂವಿನಹಡಗಲಿ:ಅ.26. ಪಟ್ಟಣದ ಭಕ್ತರ ಅಧಿದೇವತೆ ಊರಮ್ಮ ದೇವಿಗೆ ದಸರಾ ಪ್ರಯುಕ್ತ ವಿಶೇಷವಾಗಿ ಹೂವಿನ ಅಲಂಕಾರ ನೆರವೇರಿಸಲಾಯಿತು.
ಗ್ರಾಮ ದೇವತೆ ದೇವಸ್ಥಾನ ಸಮಿತಿಯವರು ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪಟ್ಟಣ ನಿವಾಸಿ ಈಟಿ ಸುಲೋಚನಮ್ಮ ಮಕ್ಕಳು ದೇವಿಗೆ ಹೂವಿನ ಅಲಂಕಾರ ಸೇವೆ ಸಲ್ಲಿಸಿದರು.
ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಜಿ.ಬಿ.ಹಂಸಾನಂದಾಚಾರ್ಯ ಹಾಗೂ ಕಲಾವಿದ ಸೋಮಶೇಖರ ಪುರಾಣ ಪ್ರವಚನ ನಡೆಸಿಕೊಟ್ಟರು. 36ನೇ ವರ್ಷದ ಶ್ರೀ ದೇವಿ ಪುರಾಣ ಕಾರ್ಯಕ್ರಮದಲ್ಲಿ ಗ್ರಾಮದೇವತಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಉಪಾಧ್ಯಕ್ಷ ಈಡಿಗರ ಕೃಷ್ಣಪ್ಪ, ವಿಜಯಕಾಂತ ಪಾಟೀಲ್, ಹೇಮಗಿರಿಯಪ್ಪ, ಮುರಳಿ, ಪ್ರಕಾಶ್, ಜಗದೀಶ್, ಗಡಿಗಿ ಬಸಣ್ಣ, ಕೊಟ್ರಯ್ಯ, ವೀರಯ್ಯ, ಎ.ಕೊಟ್ರಗೌಡ, ಅರ್ಚಕ ಕೊಟ್ರೇಶ ಇತರರು ಇದ್ದರು. ಈ ವರ್ಷ ಕೊರೋನಾ ಮಹಾಮಾರಿ ರೋಗ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಅತ್ಯಂತ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ತಿಳಿಸಿದರು.
ವೀಳ್ಯಾದ ಎಲೆ ಹಾಗೂ ನಾನಾ ಬಗೆಯ ಹೂಗಳಿಂದ ದೇವಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಇಡೀ ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಕಾಳಮ್ಮ ದೇವಿಗೆ ಅಲಂಕಾರ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ದಸರಾ ಆಚರಣೆಗಳು ಜರುಗಿದವು. ದೇವಿಯನ್ನು ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಪಾರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.