ಹೂವಿನಹಡಗಲಿ ಗವಿಸಿದ್ಧೇಶ್ವರ ರಥೋತ್ಸವ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಮಾ,1- ಪಟ್ಟಣದ ಗವಿಸಿದ್ಧೇಶ್ವರ ಸ್ವಾಮಿಯ 29ನೇ ವರ್ಷದ ರಥೋತ್ಸವ ಸಡಗರ, ಸಂಭ್ರಮದಿಂದ  ವಿಜೃಂಭಣೆಯಿಂದ ಜರುಗಿತು.
ಗವಿಮಠದಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತಂದು ತಳಿರು, ತೋರಣಗಳಿಂದ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಹೆಚ್.ಭಾಗ್ಯಲಕ್ಷ್ಮಿ ಈಶಣ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜಯಘೋಷದ ನಡುವೆ ರಥೋತ್ಸವ ಪ್ರಾರಂಭವಾಯಿತು. ಇದಕ್ಕೂ ಮುನ್ನ ನಡೆದ ಹರಾಜಿನಲ್ಲಿ ಮಾಲಗಿತ್ತಿಯ ಭಕ್ತರು ರೂ.51,000ಕ್ಕೆ ರುದ್ರಾಕ್ಷಿ ಮಾಲೆ ಹಾಗೂ ಸೊಪ್ಪಿನ ಶಿವಲೀಲಮ್ಮ ಅವರು ರೂ. 75,101ಕ್ಕೆ ಸ್ವಾಮಿಯ ಪಟಾಕ್ಷಿಯನ್ನು ಪಡೆದರು.
ಸಮಾಳ, ನಂದಿಕೋಲು, ಮಂಗಳವಾದ್ಯಗಳು ರಥೋತ್ಸವದ ಮೆರಗನ್ನು ಹೆಚ್ಚಿಸಿದ್ದವು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ, ರಥಕ್ಕೆ ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಲಿಂಗನಾಯ್ಕನಹಳ್ಳಿಯ ಚನ್ನವೀರ ಸ್ವಾಮೀಜಿ, ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಗದ್ದಿಕೇರಿಯ ಚರಂತೇಶ್ವರ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಅಳವಂಡಿಯ ಸಿದ್ದಲಿಂಗ ಸ್ವಾಮೀಜಿ,
ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ, ಹೊಳಲು ಮಲ್ಲಿಕಾರ್ಜುನ ಮಠದ ಚನ್ನಬಸವ ಸ್ವಾಮೀಜಿ ಇತರರು ಭಾಗವಹಿಸಿದ್ದರು.
ಬೆಳಿಗ್ಗೆ ಗವಿಮಠದಲ್ಲಿ ಮಾನಿಹಳ್ಳಿಯ ಮಳೆಯೋಗೀಶ್ವರ ಸ್ವಾಮೀಜಿ ಜಂಗಮ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಿದರು. ನಂತರ ಜರುಗಿದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.

One attachment • Scanned by Gmail