ಹೂವಿನಹಡಗಲಿ : ಉರುಸ್ ಅಂಗವಾಗಿ ಜಂಗೀ ಕುಸ್ತಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.14: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ಉರುಸ್ ಅಂಗವಾಗಿ ಜಂಗೀ ಕುಸ್ತಿ ಪಂದ್ಯಾವಳಿಗಳು ನಡೆದವು.
ಯುವ ಮುಖಂಡ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
 ಕುಸ್ತಿ ಪಂದ್ಯಾವಳಿಯ ಮೊದಲ ದಿನದಂದು ದಾವಣಗೆರೆ, ಹಾವೇರಿ, ಬೆಳಗಾವಿ, ಧಾರವಾಡ, ಹರಪನಹಳ್ಳಿ, ಸವದತ್ತಿ, ಮಾಸೂರು ಸೇರಿದಂತೆ ನಾನಾ ಭಾಗಗಳ ಕುಸ್ತಿ ಪೈಲ್ವಾನರು ಭಾಗವಹಿಸಿದ್ದರು.
ಮೊದಲ ದಿನದ ಪಂದ್ಯಾವಳಿಯಲ್ಲಿ ವಿಶಿಷ್ಟ ಪಟ್ಟುಗಳೊಂದಿಗೆ ಹರಪನಹಳ್ಳಿಯ ಶರತ್ ಮತ್ತು ಕಲಘಟಗಿಯ ಬಸವರಾಜ ಜೋಡಿ ಗಮನ ಸೆಳೆಯಿತು. ಅಚಿತಿಮವಾಗಿ ಶರತ್ ಮೇಲುಗೈ ಸಾಧಿಸಿದರು. ಹರಪನಹಳ್ಳಿಯ ಶಮ್ಮು, ದಾವಣಗೆರೆಯ ಯೋಗೀಶ್ ನಡುವಿನ ರೋಚಕ ಹಣಾಹಣಿಯಲ್ಲಿ ಶಮ್ಮು ಗೆಲುವು ಸಾಧಿಸಿದರು.
ಮಾಸೂರಿನ ಅಬ್ದುಲ್  ಹರಪನಹಳ್ಳಿ ವಿಶಾಲ್, ದಾವಣಗೆರೆಯ ದೀಪಕ್ ಬೆಳಗಾವಿಯ ಚೇತನ್, ಹರಪನಹಳ್ಳಿ ಹಾಲೇಶ ದಾವಣಗೆರೆ ಸತೀಶ ನಡುವಿನ ಕುಸ್ತಿಗಳು ಗಮನ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿ ಪಂದ್ಯಾವಳಿ ವೀಕ್ಷಣೆಗಾಗಿ ತಾಲೂಕು ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯ ಕುಸ್ತಿ ಪ್ರಿಯರು ನೆರೆದಿದ್ದರು. ಸಿಳ್ಳೆ, ಕೇಕೆ, ಚಪ್ಪಾಳೆಯೊಂದಿಗೆ ತಮ್ಮ ನೆಚ್ಚಿನ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು.
ಉರುಸು ಕಮಿಟಿ ಅಧ್ಯಕ್ಷ ಅರುಣಿ ಮಹ್ಮದ್ ರಫಿ, ಕೆ.ಗೌಸ್ ಮೊಹಿದ್ದೀನ್, ದಾವಲ್ ಮಲ್ಲಿಕ್, ಶೇಕ್ ಮಹ್ಮದ್, ಹಂಪಸಾಗರ ರಫಿ, ಮುಖಂಡ ಶಿವಪುರ ಸುರೇಶ, ಗೌಸ್ ಸಾಬ್, ಮಾಣಿಕ್, ಇಸಾಕ್, ಬಿಚ್ಚುಗತ್ತಿ ಖಾಜಾಹುಸೇನ್, ಬಿಚ್ಚುಗತ್ತಿ ಬುಡೇನ್ ಇತರರು ಇದ್ದರು.