ಹೂವಿನಹಡಗಲಿ : ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.24: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗವಿಸಿದ್ದೇಶ್ವರ ಮಠದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯ ಬೀದಿಯ ಮೂಲಕ ಸಾಗಿ ಶಾಸ್ತ್ರಿ ವೃತ್ತ ತಲುಪಿ, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.
ಫೆಡರೇಷನ್ ಅಧ್ಯಕ್ಷೆ ಬಿ.ಜಯಲಕ್ಷ್ಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯ ಖಾನಾಪುರಕ್ಕೆ ಬಂದಿದ್ದ ಪ್ರಿಯಾಂಕ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸುವ 6ನೇ ಗ್ಯಾರಂಟಿ ಘೋಷಿಸಿದ್ದರು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಲು, ಮೊಟ್ಟೆ ಸಮರ್ಪಕ ಪೂರೈಕೆಯಾಗುತ್ತಿಲ್ಲ. ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಕೂಡಲೇ ಹಾಲು, ಮೊಟ್ಟೆಯನ್ನು ಸರಬರಾಜು ಮಾಡಬೇಕು.  ನಾಲ್ಕು ವರ್ಷಗಳ ಹಿಂದೆ ಕಾರ್ಯಕರ್ತೆಯರಿಗೆ ನೀಡಿರುವ ಮೊಬೈಲ್‍ಗಳು ಹಾಳಾಗಿದ್ದು, ಟ್ಯಾಬ್ ಅಥವಾ ಹೊಸ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಕಾರ್ಯದರ್ಶಿ ಸುರೇಶ ಹಲಗಿ, ಮುಖಂಡ ಗುಡಿಹಳ್ಳಿ ಹಾಲೇಶ ಮಾತನಾಡಿದರು. ಸುನೀತಾ, ಜೆ.ಇಂದಿರಾ, ವೀರಮ್ಮ, ವಿಜಯ, ಕೆ.ಸವಿತಾ, ಮೀನಾಕ್ಷಿ ಇತರರು ಇದ್ದರು.