ಹೂವಿನಹಡಗಲಿಯಲ್ಲಿ ನೇತ್ರ ತಪಾಸಣೆ ಶಿಬಿರ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.14: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನೇತ್ರ ತಜ್ಞರಾದ ಡಾ. ಕಾಜಲ್,  ಡಾ. ಕೀರ್ತಿ ವಿಜಯ್ ಅವರು 600ಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ನಡೆಸಿ, 255 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಶಿವಕುಮಾರ್ ಶಿಬಿರ ಉದ್ಘಾಟಿಸಿ, ಕಣ್ಣಿನ ಸಮಸ್ಯೆಗಳ ಬಗ್ಗೆ ಉದಾಸೀನ ಮಾಡಬಾರದು. ಕಾಲಕಾಲಕ್ಕೆ ತಪಾಸಣೆಗೆ ಒಳಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ನೇತ್ರ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ವೈದ್ಯಕೀಯ ಪರಿಕರಗಳನ್ನು ಕಲ್ಪಿಸಿಕೊಟ್ಟಲ್ಲೇ ಇಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ. ವೈದ್ಯಕೀಯ ಪರಿಕರಗಳಿಗೆ ಜನಪ್ರತಿನಿಧಿಗಳು ಅನುದಾನ ಕೊಡಿಸಬೇಕು ಎಂದರು.
ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಣ್ಣು ದೇಹದ ಮುಖ್ಯ ಅಂಗವಾಗಿದ್ದು, ಕಣ್ಣಿನ ಸಾಮಾನ್ಯ ತೊಂದರೆಗಳನ್ನು ನಿರ್ಲಕ್ಷಿಸಬಾರದು. ಇಂತಹ ಶಿಬಿರಗಳ ಪ್ರಯೋಜನ ಪಡೆದು ಕಣ್ಣುಗಳ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಗಂಗಪ್ಪ, ಗುರುಸಿದ್ದಪ್ಪ, ಯು.ಹಾಲಪ್ಪ, ಕನ್ನಿಹಳ್ಳಿ ಮಲ್ಲಣ್ಣ, ವೀರಪ್ಪ ಇತರರು ಇದ್ದರು.