ಹೂವಿನಹಡಗಲಿಯಲ್ಲಿ ನಾಗರ ಪಂಚಮಿ ಸಂಭ್ರಮ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಅ.21 : ಪಟ್ಟಣದಲ್ಲಿ ನಾಗರ ಪಂಚಮಿ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಬೆಳಗ್ಗೆ ಮನೆಯ ಅಂಗಳವನ್ನು ಶುಭ್ರಗೊಳಿಸಿದ ಮಹಿಳೆಯರು, ರಂಗೋಲಿಯಲ್ಲಿ ನಾಗದೇವತೆ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬಿದ್ದು ಪ್ರತಿ ಮನೆಯ ಮುಂದೆ ಕಂಡು ಬಂದಿತು.
ಮಹಿಳೆಯರು, ಮಕ್ಕಳು ಹೊಸಬಟ್ಟೆ ತೊಟ್ಟು  ಕುಟುಂಬದ ಸದಸ್ಯರೊಂದಿಗೆ ನಾಗ ವಿಗ್ರಹಗಳು ಇರುವಲ್ಲಿಗೆ ತೆರಳಿ ಭಕ್ತಿಭಾವದಿಂದ ಹಾಲೆರೆದರು. ನಾಗಪಂಚಮಿ ನಿಮಿತ್ತ ಹಿಂದಿನ ದಿನವೇ ತಯಾರಿಸಿದ್ದ ವಿವಿಧ  ಬಗೆಯ ಉಂಡೆ, ಸಿಹಿ ತಿನಿಸು ಮುಂತಾದ ಖಾದ್ಯಗಳನ್ನು ನಾಗದೇವತೆಗೆ  ನೈವೇದ್ಯ ಅರ್ಪಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ನಾಗರ ಪಂಚಮಿ ನಿಮಿತ್ತ ಯುವಕರು ದೈಹಿಕ ಕಸರತ್ತಿನ ಕ್ರೀಡೆಗಳಲ್ಲಿ ಪಾಲ್ಗೊಂಡು ಮನೋರಂಜನೆ ಪಡೆದರು. ಮರಗಳಿಗೆ ಹಗ್ಗ ಕಟ್ಟಿ  ಮಹಿಳೆಯರು, ಮಕ್ಕಳು  ಜೋಕಾಲಿ ಆಡಿ ಸಂಭ್ರಮ ಪಟ್ಟರೆ, ಯುವಕರು ಗುಂಪು ಗುಂಪಾಗಿ ಸೇರಿ ಲಿಂಬೆಹಣ್ಣು ಎಸೆಯುವುದು, ಕಣ್ಣುಕಟ್ಟಿಕೊಂಡು ನಿಗದಿತ ಗುರಿ ಮುಟ್ಟುವುದು ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಆಡಿದರು. ಸ್ಪರ್ಧೆಯ ರೂಪದಲ್ಲಿ ನಡೆದ  ದೈಹಿಕ ಕಸರತ್ತಿನ ಜೂಜಾಟಗಳು ನಾಗರಪಂಚಮಿ ಹಬ್ಬಕ್ಕೆ ವಿಶೇಷ ಕಳೆ ತಂದುಕೊಟ್ಟವು.

One attachment • Scanned by Gmail