ಹೂವಿನಹಡಗಲಿಯಲ್ಲಿ ಕರಡಿ ಪ್ರತ್ಯಕ್ಷ : ಜನರ ಆತಂಕ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.07 : ಪಟ್ಟಣದ ಜನವಸತಿಯಲ್ಲಿ ನಿನ್ನೆ ರಾತ್ರಿ ಕರಡಿ ಪ್ರತ್ಯಕ್ಷವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಪಟ್ಟಣದ ಸೋಗಿ ರಸ್ತೆಯ ಚರ್ಚ್ ಬಳಿ ಸಂಜೆ ವಾಯು ವಿಹಾರಕ್ಕೆ ಹೋದವರಿಗೆ ಕರಡಿ ಕಾಣಿಸಿಕೊಂಡಿದೆ. ಮಧ್ಯರಾತ್ರಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹತ್ತಿರದ ಪಾಳು ಬಿದ್ದಿರುವ ಆರೋಗ್ಯ ಇಲಾಖೆ ಕಟ್ಟಡಗಳಿಂದ ಹೊರ ಬಂದು ಮಿನಿವಿಧಾನಸೌಧ ಶಾಲೆ ಹತ್ತಿರ ಕರಡಿ ಓಡಾಡಿರುವುದನ್ನು ಜನರು ನೋಡಿದ್ದಾರೆ. 5ನೇ ವಾರ್ಡ್ ಇಸ್ಲಾಂ ಪೇಟೆಯಲ್ಲಿ ಬೆಳಗಿನಜಾವ ಕರಡಿಯನ್ನು ನಾಯಿಗಳು ಬೆನ್ನಟ್ಟಿರುವ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜನವಸತಿಯಲ್ಲಿ ಕರಡಿ ಓಡಾಡಿರುವುದನ್ನು ಕೇಳಿ ಪಟ್ಟಣ ಜನತೆ ಭಯಭೀತರಾಗಿದ್ದಾರೆ. ಇಸ್ಲಾಂ ಪೇಟೆಯ ಮೂಲಕ ಕರೆಡಿ ಕತ್ತಲೆಯಲ್ಲಿ ಕಣ್ಮರೆಯಾಗಿದ್ದು, ಪಟ್ಟಣ ಜನವಸತಿಯಿಂದ ಅದು ಹೊರ ಹೋಗಿರುವ ಸಾಧ್ಯತೆ ಇದೆ ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಳಗಿನ ಜಾವದಿಂದಲೇ ಬೀಟ್ ಆರಂಭಿಸಿದ್ದಾರೆ.
ಪಟ್ಟಣದಲ್ಲಿ ಕರಡಿ ಓಡಾಡಿರುವುದು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದು ಸಂಚರಿಸಿದ ಸ್ಥಳ ಹಾಗೂ ಪಟ್ಟಣ ಹೊರ ವಲಯದಲ್ಲಿ ಸಿಬ್ಬಂದಿ ಪರಿಶೀಲಿಸಿದ್ದಾರೆ.. ಇಂದು ರಾತ್ರಿಯೂ ಬೀಟ್ ನಡೆಸುತ್ತಿದ್ದು, ಅಗತ್ಯವಿದ್ದಲ್ಲಿ ಬೋನ್ ಅಳವಡಿಸುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ರೇಣುಕಮ್ಮ ತಿಳಿಸಿದರು.