ಹೂ,ತರಕಾರಿ ಬೆಳೆಗಾರರಿಗೆ ಪ್ಯಾಕೇಜ್ ನೀಡಲು ಒತ್ತಾಯ

ಕೋಲಾರ,ಮೇ.೧೬: ಹೂ ಮತ್ತು ತರಕಾರಿ ಬೆಳೆಗಳಿಗೆ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ನಿಲ್ಲಬೇಕೆಂದು ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಅಧಿಕಾರಿ ಮೂಲಕ ಇಲಾಖೆಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.


ಮನವಿ ನೀಡಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಕೊರೋನ ೨ನೇ ಅಲೆಯ ಆರ್ಭಟಕ್ಕೆ ಅನ್ನದಾತನ ಬದುಕು ಬೀದಿಗೆ ಬಿದ್ದಿದೆ, ಸರ್ಕಾರವೈರಸ್ ನಿಯಂತ್ರಣಕ್ಕೆ ತಜ್ಞರ ವರದಿಯಂತೆ ಲಾಕ್‌ಡೌನ್ ಆದೇಶ ಮಾಡುವ ಮುಖಾಂತರ ಜನಸಾಮಾನ್ಯರ ರಕ್ಷಣೆಗೆ ಮುಂದಾಗಿರುವುದಕ್ಕೆ ಸಮಸ್ತ ರೈತರ ಬೆಂಬಲವಿದೆ. ದುಬಾರಿಯಾಗಿರುವ ರಸಗೊಬ್ಬರ ಬೆಲೆ ಏರಿಕೆಯ ನಡುವೆಯೂ ಲಕ್ಷಾಂತರ ರೂ ಬಂಡವಾಳ ಹಾಕಿ ಜಿಲ್ಲಾದ್ಯಾಂತ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದಿರುವ ಹೂ , ಕ್ಯಾಪ್ಸಿಕಾಂ, ಟೊಮೋಟೊ ಮತ್ತಿತರ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆಯಿಲ್ಲದೆ ಹಾಕಿದ ಬಂಡವಾಳ ಕೈಗೆ ಸಿಗದೆ ಲಕ್ಷಾಂತರ ರೈತರು ಸಾಲದ ಸುಳಿಗೆ ಸಿಲುಕಿ ಒಂದು ಕಡೆ ಕೊರೋನಾ ಆರ್ಭಟದ ಭಯ ಮತ್ತೊಂದೆಡೆ ಖಾಸಗಿ ಸಾಲಕ್ಕೆ ಸಿಲುಕಿ ತಪ್ಪು ನಿರ್ದಾರ ತೆಗೆದುಕೊಳ್ಳುವ ಮೊದಲು ಸರ್ಕಾರ ರೈತರ ಪರ ನಿಲ್ಲಬೇಕೆಂದು ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ, ಸರ್ಕಾರ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ಇದೆ ಎಂದು ಆದೇಶ ಮಾಡಿದ್ದಾರೆ. ಆದರೆ ಅಂತರಾಜ್ಯ ವಹಿವಾಟು ಸಮರ್ಪಕವಾಗಿ ನಡೆಯದ ಜೊತೆಗೆ ಯಾವುದೇ ಶುಭಕಾರ್ಯಗಳು, ದೇವಸ್ಥಾನ ಕಾರ್ಯಕ್ರಮಗಳು ಇಲ್ಲದೆ ಇರುವ ಕಾರಣ ಯಾವುದೇ ತರಕಾರಿಗಳಿಗೆ ಬೇಡಿಕೆಯಿಲ್ಲ. ಇವತ್ತಿನ ದುಬಾರಿಯಾಗಿರುವ ಕೃಷಿ ಕ್ಷೇತ್ರದಲ್ಲಿ ೧ ಎಕರೆ ಹೂ ಬೆಳೆ
ಮಾಡಬೇಕಾದರೆ ಕನಿಷ್ಠಪಕ್ಷ ೧ ಲಕ್ಷ ಟೊಮೋಟೋ ಕ್ಯಾಪ್ಸಿಕಾಂ, ೧ ಎಕರೆ ಬೆಳೆ ಬೆಳೆಯಲು ೨.೫ ಲಕ್ಷದಿಂದ ೩ ಲಕ್ಷ ಖರ್ಚು ಬರುತ್ತಿದೆ. ಲಾಕ್‌ಡೌನ್ ಜಾರಿಯಿರುವ ಕಾರಣ ಹೂ ಮತ್ತು ತರಕಾರಿಗಳನ್ನು
ಕೇಳುವವರು ಇಲ್ಲದಂತಾಗಿ ತೋಟಗಳಲ್ಲಿಯೇ ಬೆಳೆ ನಾಶ ಮಾಡಲು ರೈತರು ಮುಂದಾಗಿದ್ದಾರೆ.ಆದ್ದರಿಂದ ಕೊರೋನ ವೈರಸ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಒಡೆತಕ್ಕೆ ಸಿಲುಕಿ, ಸಂಕಷ್ಟದಲ್ಲಿರುವ ರೈತ ಕುಲವನ್ನು ರಕ್ಷಣೆ ಮಾಡಲು ಸರ್ಕಾರ ಹೂ ಮತ್ತು ತರಕಾರಿ ಬೆಳೆಗಳಿಗೆ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಿ ನೊಂದಿರುವ ರೈತರ ಪರ ಸರ್ಕಾರ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆಯ ಅಧಿಕಾರಿ, ಸರ್ಕಾರಕ್ಕೆ ಈಗಾಗಲೇ ರೈತರ ಪರಿಸ್ಥಿತಿ ಹಾಗೂ ಬೆಳೆ ನಾಶವಾಗಿರುವ ಬಗ್ಗೆ ವರದಿಯನ್ನು ಉಪನಿರ್ದೇಶಕರ ಮೂಲಕ ನೀಡಿದ್ದೇವೆ. ಯಾವುದೇ ಕಾರಣಕ್ಕೂ ರೈತರು ದೃತಿಗೆಡಬಾರದು ಸಮಸ್ಯೆಯಿದ್ದರೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ವಡಗೂರು ಮಂಜುನಾಥ್, ನಲ್ಲಾಂಡಹಳ್ಳಿ ಕೇಶವ, ವೇಣು, ಪೊಂಬರಹಳ್ಳಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.