ಹೂಡಿ ವಿಜಯ್‌ಕುಮಾರ್‌ಗೆ ಟಿಕೆಟ್ ನೀಡಲು ತಿಗಳ ಸಮುದಾಯ ಒತ್ತಾಯ

ಕೋಲಾರ,ಏ,೩-ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್‌ಕುಮಾರ್‌ಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವಂತೆ ತಿಗಳ ಸಮುದಾಯದ ಮುಖಂಡರು ನಗರದ ಕಾರಂಜಿಕಟ್ಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರ್ಪೂರ ಹಚ್ಚುವ ಮೂಲಕ ಒತ್ತಾಯಿಸಿದರು.
ತಿಗಳ ಸಮುದಾಯದ ಮುಖಂಡ ಸಹ್ಯಾದ್ರಿ ಎಂ.ಉದಯ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ತಿಗಳ ಸಮುದಾಯದ ಸುಮಾರು ೧ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಆದರೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಯಾರೊಬ್ಬರೂ ಬಿಂಬಿಸಿಕೊಂಡಿರಲಿಲ್ಲ.
ಇಡೀ ಜಿಲ್ಲೆಗೆ ಗೊತ್ತಿರುವಂತೆ ಹೂಡಿ ವಿಜಯ್‌ಕುಮಾರ್ ೪-೫ ವರ್ಷಗಳಿಂದ ಸಂಜೀವಿನಿ ಟ್ರಸ್ಟ್ ಮೂಲಕ ಹಲವಾರು ಸಮಾಜ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಅನುಮಾನ ಮೂಡಿಸಿವೆ. ಮಾಲೂರು ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದಿರುವ ಮಾಜಿ ಶಾಸಕರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿ ನಮ್ಮ ಸಮುದಾಯದ ಇದೀಗ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗುವ ಅವಕಾಶ ಏಕೈಕ ವ್ಯಕ್ತಿಗೆ ಬಂದಿದ್ದು, ಆಂತರಿಕವಾಗಿ, ಜನರ ಬಳಿಗೆ ಹೋಗಿ ವರದಿ ಪಡೆದುಕೊಳ್ಳಲಿ ಅವರ ಬಗ್ಗೆ ಇರುವ ಒಲವು ತಿಳಿಯುತ್ತದೆ. ಬಿಜೆಪಿಯ ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಅನೇಕರ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಹೂಡಿ ವಿಜಯ್‌ಕುಮಾರ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ವಾತಂತ್ರ ಬಂದಾಗಿನಿಂದ ಗ್ರಾಪಂ, ತಾಪಂ, ಜಿಪಂ ಹಾಗೂ ನಗರಸಭೆಗಳಿಗಷ್ಟೇ ರಾಜಕೀಯವಾಗಿ ನಮಗೆ ಅವಕಾಶ ಸಿಕ್ಕಿದೆ. ಕಳೆದಬಾರಿ ಪಿಆರ್ ರಮೇಶ್ ಎಂಎಲ್ಸಿ ಆಗಿರುವುದು ಬಿಟ್ಟರೆ ಬೇರೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ಹೂಡಿ ವಿಜಯ್‌ಕುಮಾರ್ ಅವರಿಗೆ ಟಿಕೆಟ್ ನೀಡಲೇಬೇಕಿದ್ದು, ಒಂದು ವೇಳೆ ಟಿಕೆಟ್ ನೀಡದಿದ್ದರೆ ಬಿಜೆಪಿ ವಿರುದ್ಧವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸಮುದಾಯದಲ್ಲಿಯೂ ಜನರು ಜಾಗೃತರಾಗಿದ್ದಾರೆ. ಎಲ್ಲಾ ದೇವಾಲಯಗಳಲ್ಲಿಯೂ ಕರ್ಪೂರ ಹಚ್ಚಿ ಇನ್ನಷ್ಟು ಜಾಗೃತಿಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದ ಅವರು, ಜನಾಂಗದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ದೀಪ ಬೆಳಗಿಸುವುದು ವಾಡಿಕೆ. ಧರ್ಮರಾಯಸ್ವಾಮಿ ಆರಾಧಕರು ನಾವು, ದೀಪದ ಮುಂದೆ ಹೇಳುವುದಕ್ಕೆ ಬದ್ಧರಾಗಿರುತ್ತೇವೆ. ಅದಕ್ಕಾಗಿಯೇ ಹಚ್ಚುತ್ತಿರುವುದಾಗಿ ತಿಳಿಸಿದರು.
ತಿಗಳ ಸಮುದಾಯದ ಮುಖಂಡರಾದ ಗುಣಶೇಖರ್, ನರಸಾಪುರ ಗೋಪಿ, ನಾಗರಾಜ್, ಶುಭಕರ್, ಆಂಜಿ, ನಾಗರಾಜ್, ರಂಗನಾಥ್, ಗೋವಿಂದರಾಜ್ ಇದ್ದರು.