
ಮಾಲೂರು.ಮೇ೧೬:ವಿಧಾನಸಭಾ ಚುನಾವಣೆಯಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಸೋಲನ್ನು ಅನುಭವಿಸಿದ್ದೇನೆ ಜನತೆ ನನಗೆ ೪೯,೩೫೦ ಮತಗಳನ್ನು ನೀಡಿದ್ದಾರೆ ತಾಲೂಕಿನ ಜನತೆಯ ಪ್ರೀತಿ ವಿಶ್ವಾಸ ನನ್ನ ಸ್ವಾಭಿಮಾನಿ ಕಾರ್ಯಕರ್ತರ ಮುಖಂಡರ ಶ್ರಮವನ್ನು ಎಂದಿಗೂ ಮರೆಯಲಾರೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ವಿಧಾನಸಭಾ ಚುನಾವಣೆಯ ಪಕ್ಷೇತರ ಸ್ವಾಭಿಮಾನಿ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಹೇಳಿದರು.
ಪಟ್ಟಣದ ಹೊರವಲಯದ ವೈಟ್ ಗಾರ್ಡನ್ ಬಡಾವಣೆಯಲ್ಲಿರುವ ಅವರ ನಿವಾಸದ ಬಳಿ ಇರುವ ಆವರಣದಲ್ಲಿ ವಿಧಾನಸಭಾ ಚುನಾವಣೆಯ ಸ್ವಾಭಿಮಾನಿ ಪಕ್ಷೇತರ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಚುನಾವಣೆಯಲ್ಲಿ ಶ್ರಮಿಸಿದ ತಮ್ಮ ಬೆಂಬಲಿಗ ಕಾರ್ಯಕರ್ತರ ಮುಖಂಡರ ಆತ್ಮಾವಲೋಕನ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷಗಳಿಂದ ಜನರ ಸೇವೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಮಾಡಿಕೊಂಡು ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಉಳಿದುಕೊಂಡು ಕ್ಷೇತ್ರದಲ್ಲಿನ ಬಡವರಿಗೆ ಮಧ್ಯಮ ವರ್ಗದವರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿ ಜನರ ಸೇವೆಯನ್ನು ಮಾಡಿ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಲಾಗಿತ್ತು ಆದರೆ ಬಿಜೆಪಿ ಯ ಕೆಲವು ಸಚಿವರು ಸಂಸದ ಎಸ್.ಮುನಿಸ್ವಾಮಿ ಅವರಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ತಪ್ಪಿತು, ಆದರೆ ದೃತಿ ಗೆಡದೆ ನನ್ನ ಬೆಂಬಲಿಗ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ನನ್ನ ಬೆಂಬಲಿಗ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ಮತಯಾಚನೆ ಮಾಡಲಾಯಿತು ಜನತೆ ವಿಧಾನಸಭಾ ಚುನಾವಣೆಯಲ್ಲಿ ೪೯,೩೫೦ ಮತಗಳನ್ನು ನೀಡುವ ಮೂಲಕ ಪ್ರೀತಿ ವಿಶ್ವಾಸ ತೋರಿದ್ದಾರೆ. ನಾನು ಚುನಾವಣೆಯಲ್ಲಿ ಸೋತಿರಬಹುದು ಜನರ ಮನಸ್ಸಿನಲ್ಲಿ ಉಳಿದಿದ್ದೇನೆ ನನ್ನ ಜೀವನದಲ್ಲಿ ತಾವುಗಳು ತೋರಿದ ಪ್ರೀತಿ ಎಂದಿಗೂ ಮರೆಯುವುದಿಲ್ಲ.
ನನ್ನ ಬೆಂಬಲಿಗ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ನನ್ನೊಂದಿಗೆ ಕೈಜೋಡಿಸಿ ಕಳೆದ ೪೫ ದಿನಗಳಿಂದ ಹಗಲಿರಳು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮತಯಾಚನೆ ಮಾಡುವ ಮೂಲಕ ನನಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಅವರ ಶ್ರಮ ಹಾಗೂ ಸಹಕಾರವನ್ನು ಶ್ಲಾಘಿಸುತ್ತೇನೆ.
ತಾಲೂಕಿನಲ್ಲಿ ಜನತೆಯು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರೆ ತಾಲೂಕಿನಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತಿತ್ತು. ಆದರೆ ನಾನು ಸೋಲನ್ನು ಅನುಭವಿಸಿರಬಹುದು ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದೇನೆ ಮುಂಬರುವ ದಿನಗಳಲ್ಲಿಯೂ ಸಹ ಕ್ಷೇತ್ರದಲ್ಲಿ ಉಳಿದುಕೊಂಡು ನನ್ನ ಬೆಂಬಲಿಗ ಕಾರ್ಯಕರ್ತ ಹಾಗೂ ಮುಖಂಡರ ಕಷ್ಟ ಸುಖಗಳಲ್ಲಿ ಭಾಗವಹಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಾಲೂಕಿನಲ್ಲಿ ಸಮಾಜ ಸೇವೆಯನ್ನು ಮಾಡಲಾಗುವುದು, ನನಗೆ ಟಿಕೆಟ್ ತಪ್ಪಿಸಿದ ಸಂಸದ ಎಸ್.ಮುನಿಸ್ವಾಮಿಯವರಿಗೆ ತಾಲೂಕಿನ ಜನತೆ ಹಾಗೂ ನನ್ನ ಬೆಂಬಲಿಗ ಕಾರ್ಯಕರ್ತರು ಮತ್ತು ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಸಂಸದರನ್ನು ಸೋಲಿಸಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು.
ತಾಲೂಕಿನಲ್ಲಿ ೨ನೇ ಬಾರಿಗೆ ಜನಾದೇಶವನ್ನು ಪಡೆದ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಅಭಿನಂದಿಸುತ್ತೇನೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಯನ್ನು ಮಾಡಲು ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡಿಲ್ಲವೆಂದು ಹೇಳುತ್ತಿದ್ದರು, ಆದರೆ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಹೆಚ್ಚುವರಿ ಅನುದಾನಗಳನ್ನು ತಂದು ತಾಲೂಕಿನ ಅಭಿವೃದ್ಧಿ ಮಾಡುವುದರ ಮೂಲಕ ತಾಲೂಕಿನಾದ್ಯಂತ ಎಲ್ಲಾ ರಸ್ತೆಗಳನ್ನು ಧೂಳು ಮುಕ್ತ ರಸ್ತೆಗಳನ್ನಾಗಿ ಮಾಡಿಸಬೇಕು, ಅಲ್ಲದೆ ಜನರಿಗೆ ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು, ಕಂದಾಯ ಇಲಾಖೆಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನೀಡುವಂತೆ ಶುಭ ಹಾರೈಸುವುದಾಗಿ ಹೇಳಿದರು.
ಕೃತಜ್ಞತಾ ಸಭೆಗೆ ಆಗಮಿಸಿದ ಹೂಡಿ ವಿಜಯಕುಮಾರ್ ಬೆಂಬಲಿಗ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬಿರಿಯಾನಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶ್ವೇತಾ ವಿಜಯ್ ಕುಮಾರ್, ಆರ್.ಪ್ರಭಾಕರ್, ಹನುಮಪ್ಪ, ರಾಜಾರಾಮ್, ದೇವರಾಜ್ ರೆಡ್ಡಿ, ಪಿ.ನಾರಾಯಣಸ್ವಾಮಿ, ಮೋಹನ್ ಬಾಬು, ಸಿ.ಪಿ.ವೆಂಕಟೇಶ್, ರಾಮಮೂರ್ತಿ, ವೆಂಕಟೇಶ್‌ಗೌಡ, ಹರೀಶ್‌ಗೌಡ, ಚಂದ್ರಪ್ಪ, ಕೃಷ್ಣಪ್ಪ, ಅಮರೇಶ್‌ರೆಡ್ಡಿ, ತಿಪ್ಪಯ್ಯ, ರವಿ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ವಕೀಲ ಮುನಿಯಪ್ಪ, ಗೋಪಾಲ್, ಪ್ರಭಾಕರ್, ಎಸ್.ಎಂ.ರಮೇಶ್, ಮಂಜುನಾಥ್, ಇನ್ನಿತರರು ಹಾಜರಿದ್ದರು.