ಹೂಗಾರ ಸಮಾಜಕ್ಕೆ ಪ್ಯಾಕೇಜ್ ನೀಡಿ

ವಾಡಿ:ಮೇ.28: ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‍ಡೌನ್‍ನಿಂದ ಹೂವು ಕಟ್ಟಿಕೊಂಡು ಮಾರಾಟ ಮಾಡುತ್ತಿದ್ದ, ಹೂಗಾರ ಸಮಾಜದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸಾಮಾಜಿಕ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಹೂಗಾರ ಸಮಾಜಕ್ಕೆ ಲಾಕ್‍ಡೌನ್ ಪ್ಯಾಕೇಜ್ ನೀಡಬೇಕೆಂದು ಸಮಾಜದ ಯುವ ಮುಖಂಡ ರಾಘವೇಂದ್ರ ಹೂಗಾರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೂವು ಬೆಳೆಗಾರರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಹೂಗಾರರು, ಹೂವು ಪ್ರತಿ ನೀಡುವ ಹಾಗೂ ಹೂವಿನ ಮಾಲೆ ಕಟ್ಟಿ ಕಾಯಕ ಮಾಡುತ್ತಿರುವ ಕಾಯಕ ಜೀವಿಗಳಿಗೆ ಇಲ್ಲಿಯವರೆಗೆ ಯಾವುದೇ ಪ್ಯಾಕೇಜ್ ನೀಡಿಲ್ಲ. ಅಲ್ಲದೆ ಕಳೆದ ಬಾರಿಯ ಲಾಕ್‍ಡೌನ್‍ನಲ್ಲಿಯೂ ಹೂಗಾರ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಅವರು ದೂರಿದ್ದಾರೆ.

ಲಾಕ್‍ಡೌನ್‍ನಿಂದ ವ್ಯಾಪಾರವಿಲ್ಲದೆ ಹೂವಿನ ರೀತಿಯಲ್ಲಿ ಜೀವನ ಬಾಡಿದೆ. ಸಮಾಜ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಸರ್ಕಾರ ಪ್ರತಿ ಕುಟುಂಬಕ್ಕೆ 10 ಸಾವಿರ ಸಹಾಯಧನ ಪರಿಹಾರ ನೀಡಬೇಕೆಂದು ರಾಘವೇಂದ್ರ ಒತ್ತಾಯಿಸಿದ್ದಾರೆ.